ಕಾರವಾರ: ಅವಧಿ ಮುಗಿದ ಬಳಿಕವೂ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಹಾಗೂ ಜನರನ್ನು ಪೊಲೀಸರು ಲಾಠಿ ಮೂಲಕ ಚದುರಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮಾರುಕಟ್ಟೆಗಳಿಗೆ ಬೆಳಗ್ಗೆಯಿಂದಲೇ ಮುಗಿಬಿದ್ದು ಖರೀದಿ ನಡೆಸಿದ್ದರು. 6 ಗಂಟೆಯಿಂದ 10 ಗಂಟೆವರೆಗೂ ಅವಕಾಶ ಕಲ್ಪಿಸಿದ್ದರು ಕೂಡ 10 ಗಂಟೆ ಬಳಿಕ ಮಾರುಕಟ್ಟೆ ಜನರಿಂದ ತುಂಬಿಕೊಂಡಿತ್ತು. ಪೊಲೀಸರು ಸೈರನ್ ಮೂಲಕ ಎಚ್ಚರಿಸಿದ್ದರೂ ಕ್ಯಾರೇ ಎನ್ನದೇ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಮುಂದುವರೆಸಿದ್ದರು.
ಇದರಿಂದ ಸಿಟ್ಟಾದ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಸಿಪಿಐ ಸಂತೋಷ್ ಶೆಟ್ಟಿ, ಎಚ್ವರಿಕೆ ನಡುವೆಯೂ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೆ ಅನವಶ್ಯಕವಾಗಿ ಓಡಾಡುತ್ತಿದ್ದವರಿಗೆ ವಾರ್ನಿಂಗ್ ಮಾಡಿದ ಪೊಲೀಸರು ತಕ್ಷಣ ಜಾಗ ಖಾಲಿ ಮಾಡುವಂತೆ ಸೂಚಿಸಿದ್ದಾರೆ.