ಕಾರವಾರ: ಕೋವಿಡ್ ನಿಯಮ ಉಲ್ಲಂಘಿಸಿ 50ಕ್ಕೂ ಹೆಚ್ಚು ಜನರು ಸೇರಿದ್ದ ಮದುವೆ ಸಮಾರಂಭವೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸರು, ಮದುವೆಗೆ ಬಂದವರನ್ನು ಸಭಾಂಗಣದಿಂದ ಹೊರಗೆ ಕಳುಹಿಸಿದ ಘಟನೆ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ನಡೆದಿದೆ.
ಕೋವಿಡ್ ಮಾರ್ಗಸೂಚಿ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಗುತ್ತಿತ್ತು. ಮಾಂಗಲ್ಯ ಧಾರಣೆಯೂ ನಡೆದು, ಆರತಕ್ಷತೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಪೊಲೀಸರೊಂದಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈ ಸಂದರ್ಭ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಮೈಕ್ನಲ್ಲಿ ಸೂಚಿಸಿದ್ದಾರೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಕೆಲವರು ಉಡುಗೊರೆ ನೀಡದೆ, ಊಟವನ್ನೂ ಮಾಡದೆ ಭಯದಲ್ಲಿ ಸಭಾಂಗಣದಿಂದ ಹೊರ ಹೋಗಿದ್ದಾರೆ.
ಕೆಲ ಸಮಯದ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು. ಬಳಿಕ ಸರದಿ ಸಾಲಿನಲ್ಲಿ ಉಡುಗೊರೆ ನೀಡಿ, ಕೆಲವರು ಊಟ ಮಾಡಿ ತೆರಳಿದರು.
ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಇದಾಗಿದ್ದು, ಮಾರ್ಗಸೂಚಿ ಪ್ರಕಟವಾಗುವ ಮುನ್ನವೇ ಆಮಂತ್ರಣ ಪತ್ರಿಕೆ ಹಂಚಿಯಾಗಿತ್ತು. ಮದುವೆಗೆ ಬಂದವರಿಗೂ ಹೊರ ಹೋಗುವಂತೆ ಹೇಳಲು ಆಗದ ಕಾರಣ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ದಿಢೀರ್ ಎಂದು ಅಧಿಕಾರಿಗಳು ದಾಳಿ ನಡೆಸಿದ್ದು, ಬೇಸರವೆನಿಸಿತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮದುವೆ ಜೀವನದಲ್ಲಿ ಒಮ್ಮೆ ನಡೆಯುವುದು. ತಂದೆ-ತಾಯಿಗೆ ಒಬ್ಬರೇ ಮಕ್ಕಳಿದ್ದರಂತೂ ಮದುವೆಗೆ ನೂರಾರು ಕನಸಿಟ್ಟುಕೊಂಡಿರುತ್ತಾರೆ. ಆದರೆ ಈ ರೀತಿ ಕೋವಿಡ್ ಹೆಸರಲ್ಲಿ ಸಂಭ್ರಮದ ಕಾರ್ಯಕ್ರಮದಲ್ಲಿ ಆತಂಕ ಉಂಟುಮಾಡುವ ಕಾರ್ಯವಾಗಬಾರದು. ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಇಂಥ ಕಾರ್ಯಕ್ರಮಗಳ ಆಚರಣೆಗೆ ಅವಕಾಶ ನೀಡಬೇಕು ಎಂದು ಸ್ಥಳೀಯರಾದ ಪ್ರದೀಪ ಗುನಗಿ ಒತ್ತಾಯಿಸಿದ್ದಾರೆ.
ಓದಿ: ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪೊಲೀಸರ ನಡೆಗೆ ಧಾರವಾಡ ಜನತೆಯ ಅಸಮಧಾನ