ಶಿರಸಿ: ಅಡಿಕೆ ವ್ಯಾಪಾರಿಗಳು ಎಂದೇಳಿಕೊಂಡು ಇಲ್ಲಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಆರೋಪಿಗಳನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಮೂಲದವರು ಎನ್ನಲಾದ ತೈಯ್ಯಬ್ ಬಿಬನ್ ಶೇಖ್ ಪಾನವಾಡಿ ಸೋನಿ, ಅನೀಲ್ ಮಾಧವ ವಾಘ ಹಾಗೂ ಬಾಬಾಸಾಹೇಬ್ ಪರಶುರಾಮ ಸಾಸೆ ಬಂಧಿತ ಆರೋಪಿಗಳು. ಇವರನ್ನು ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಇವರ ವಿರುದ್ಧ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಗುಜರಾತ್, ಮಹಾರಾಷ್ಟ್ರ ಇತರೆ ರಾಜ್ಯಗಳಿಂದ ಅಡಿಕೆ ವ್ಯಾಪಾರಿಗಳು ಅಂತ ಹೇಳಿಕೊಂಡು ಬಂದು ಸ್ಥಳೀಯ ವ್ಯಾಪಾರಿಗಳಲ್ಲಿ ಅಡಿಕೆ ಖರೀದಿಸಿ ಹಣ ನೀಡದೆ ಮೋಸ ಮಾಡುವ ಜಾಲಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದ ಅಡಿಕೆ ವ್ಯಾಪಾರಿಗಳು ಜಾಗರೂಕತೆಯಿಂದ ಇರಬೇಕು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಶಿರಸಿ ವೃತ್ತ ನಿರೀಕ್ಷಕರಾದ ಬಿ.ಯು. ಪ್ರದೀಪ್ ಮನವಿ ಮಾಡಿದ್ದಾರೆ.