ಕಾರವಾರ: ಮಹಿಳೆ ಮುಖಕ್ಕೆ ಖಾರದಪುಡಿ ಎರಚಿ ರಾಡ್ನಿಂದ ಹಲ್ಲೆ ಮಾಡಿದ್ದ ಕಿರಾತಕರು, ಆಕೆ ಮೂರ್ಛೆ ಹೋದಾಗ ಮೃತಪಟ್ಟಿದ್ದಾಳೆ ಎಂದು ತಿಳಿದು ಹಳ್ಳವೊಂದಕ್ಕೆ ಎಸೆದಿದ್ದರು. ಇದೀಗ ಆ ಮಹಿಳೆಯೇ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ದಾಂಡೇಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ:
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗೀತಾ ಅರ್ಜುನ್ ಗೌಡ ಕೀಚಕರಿಂದ ಪಾರಾಗಿ ಬಂದಿರುವ ಮಹಿಳೆ. ಈಕೆ ಬೇರೆ ಜಾತಿಗೆ ಸೇರಿದ ಅರ್ಜುನ್ ಗೌಡ ಎಂಬುವರನ್ನು ಪ್ರೀತಿಸಿ 2016 ರಲ್ಲಿ ಮದುವೆಯಾಗಿದ್ದಳು. ನಂತರ ಇಬ್ಬರ ನಡುವೆ ಜಗಳವಾಗಿತ್ತು.
ಇದರಿಂದ ಕೋಪಗೊಂಡ ಪತಿ ಅರ್ಜುನ ಗೌಡ, ಪತ್ನಿಯನ್ನು ಕೊಲೆ ಮಾಡಿಸಲು ಮುಂದಾಗಿದ್ದ. ಅದಕ್ಕಾಗಿ ತನ್ನ ಸಂಬಂಧಿಗಳಾದ ಹುಬ್ಬಳ್ಳಿಯ ಅರಳಿಕಟ್ಟೆ ನಿವಾಸಿ ಬಸವರಾಜ ಗದಿಗೆಪ್ಪಾ ಹೊಸಮನಿ, ಶಿಗ್ಗಾಂವಿಯ ರವಿ ಅಶೋಕ ಬುಳಕ್ಕನವರ, ಶಿಗ್ಗಾಂವಿ ಮಂಜುನಾಥ ಬಸವಣ್ಣೆಪ್ಪ ಹಿತ್ತಲಮನಿ ಎಂಬುವರಿಗೆ ಸುಫಾರಿ ನೀಡಿದ್ದನು.
ಅದರಂತೆ ಈ ಮೂವರು ಸೆ.16 ರಂದು ಶಿಗ್ಗಾಂವಿ ಪಟ್ಟಣದ ಹೊರ ವಲಯಕ್ಕೆ ಗೀತಾರನ್ನು ಕರೆಸಿಕೊಂಡು ಅವರ ಕಣ್ಣಿಗೆ ಮರಳು, ಖಾರದ ಪುಡಿ ಎರಚಿ ರಾಡ್ನಿಂದ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಸ್ಥಳದಲ್ಲೇ ಮೂರ್ಛೆ ಹೋಗಿದ್ದರು. ಆದರೆ ಆಕೆ ಸಾವನ್ನಪ್ಪಿದಳು ಎಂದು ಭಾವಿಸಿ ಕಿರಾತಕರು, ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಶಿಗ್ಗಾವಿಯಿಂದ ಮುಂಡಗೋಡ, ಕಲಘಟಗಿ ಮಾರ್ಗವಾಗಿ ಬಂದು ದಾಂಡೇಲಿಯ ಕರ್ಕಾ ನಾಕಾ ಹತ್ತಿರದ ಹಳ್ಳಕ್ಕೆ ಎಸೆದು ಹೋಗಿದ್ದರು.
ಆದರೆ ಸೇತುವೆ ಕೆಳಗಡೆ ಬಿದ್ದಿದ್ದ ಗೀತಾ ಹಳ್ಳದಿಂದ ಪವಾಡ ಸದೃಶ್ಯ ಎಂಬಂತೆ ಎದ್ದು ರಸ್ತೆಗೆ ಬಂದು ಸಾರ್ವಜನಿಕರ ಮೂಲಕ ದಾಂಡೇಲಿ ಗ್ರಾಮೀಣ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಗಾಯಗೊಂಡ ಗೀತಾಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ದೂರು ದಾಖಲಿಸಿಕೊಂಡಿದ್ದರು.
ದಾಂಡೇಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಇದನ್ನೂ ಓದಿ: ಗಣಿತ, ಭೌತವಿಜ್ಞಾನಕ್ಕೆ ತಲಾ 3 ಗ್ರೇಸ್ ಮಾರ್ಕ್ಸ್: 7,000 ವಿದ್ಯಾರ್ಥಿಗಳ ರ‍್ಯಾಂಕ್ ತಡೆ ಹಿಡಿದ ಪ್ರಾಧಿಕಾರ