ಶಿರಸಿ :ಶ್ರೀ ಗಂಧದ ಮರದ ತುಂಡುಗಳನ್ನು ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಸ್ತೂರ ಬಾ ನಗರದ ಇರ್ಷಾದ್ ಖಾದರ್ ಸಾಬ ಹಾಗೂ ಬಸಳೆಕೊಪ್ಪದ ಯಾಸೀನ್ ಅಲಿಯಾಸ್ ಮುನ್ನಾ ಹಸನಸಾಬ ಬಂಧಿತ ಆರೋಪಿಗಳು. ಇವರು ಶಿರಸಿ - ಕರಿಗುಂಡಿ ರಸ್ತೆಯ ಲಿಡ್ಕರ್ ಕಾಲೋನಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 26 ಸಾವಿರ ಬೆಲೆ ಬಾಳುವ 1 ಕೆಜಿ 300 ಗ್ರಾಂ ತೂಕದ ಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಆರೋಪಿ ಕಸ್ತೂರ ಬಾ ನಗರದ ಅಕ್ಬರ್ ಇಬ್ರಾಹಿಂ ಶೇಖ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದಲ್ಲಿ ಎಎಸ್ಐ ಶಿವಕುಮಾರ ಸಿಬ್ಬಂದಿಗಳಾದ ಚಿದಾನಂದ ನಾಯ್ಕ, ಇಸ್ಮಾಯೀಲ್ ಕೋಣನಕೇರಿ, ಹನಮಂತ ಮಾಕಾಪುರ ಮೋಹನ ನಾಯ್ಕರವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.