ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ವೇಳೆಗೆ ಹೆಚ್ಚಾಗಿ ಕಂಡುಬರುವ ಸಾಂಕ್ರಾಮಿಕ ರೋಗಗಳು ಈ ಬಾರಿ ನಿಯಂತ್ರಣದಲ್ಲಿವೆ. ಆದರೂ ಎಲ್ಲೆಡೆ ರೋಗದ ಕುರಿತು ನಿಗಾ ವಹಿಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಸರದ್ ನಾಯಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಡೆಂಗ್ಯೂನಂತಹ ಕೆಲ ರೋಗಗಳು ಹೆಚ್ಚಾಗಿ ಹರಡುತ್ತಿದ್ದವು. ಹೀಗಾಗಿ, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇದರಿಂದ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದಿವೆ. ಜಿಲ್ಲೆಯಲ್ಲಿ 32 ಡೆಂಗ್ಯೂ, 5 ಚಿಕೂನ್ ಗುನ್ಯಾ, 3 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಜಿಲ್ಲಾ ಆಶ್ರಿತ ರೋಗ ವಾಹಕಗಳ ನಿಯಂತ್ರಣಾಧಿಕಾರಿ ಡಾ. ಕ್ಯಾಪ್ಟನ್ ರಮೇಶ್ರಾವ್ ಮಾತನಾಡಿ, ಅಡಿಕೆ ತೋಟ ಸೇರಿದಂತೆ ಇತರೆಡೆ ಮಳೆ ನೀರು ಸಂಗ್ರಹವಾಗಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.