ಶಿರಸಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಎಲ್ಲೆಡೆ ಅವಾಂತರವನ್ನ ಸೃಷ್ಟಿಸಿದ್ದು, ಕೆಲವರು ಮನೆ, ತೋಟಗಳನ್ನ ಕಳೆದುಕೊಂಡಿದ್ದಾರೆ. ಇನ್ನು ಹಲವರ ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮಳೆಗೆ ಸುಮಾರು 4 ಎಕರೆಯಷ್ಟು ಭೂಮಿ ಬಾಯ್ತೆರೆದಿರುವ ಘಟನೆ ಜಿಲ್ಲೆಯ ಸಿದ್ದಾಪುರದ ಭಾನ್ಕುಳಿ ಸಮೀಪ ನಡೆದಿದೆ.
ಹೌದು, ಭಾರೀ ಮಳೆಗೆ ಇಲ್ಲಿನ ಭೂಮಿ ನಿಧಾನವಾಗಿ ಬಾಯ್ತೆರೆಯಲು ಆರಂಭಿಸಿದೆ. ದೊಡ್ಡದಾಗಿ ಶಬ್ದ ಬಂದು ಭೂಮಿ ನಿಧಾನವಾಗಿ ಕೆಳಗಡೆ ಇಳಿದಿದೆ. ಸುಮಾರು 4ರಿಂದ 5 ಎಕರೆಯಷ್ಟು ಭೂಮಿ ಈಗಾಗಲೇ ಕುಸಿದಿದ್ದು, ಇದರಿಂದಾಗಿ 1 ಮನೆ ಕೂಡ ಅಪಾಯದ ಅಂಚಿನಲ್ಲಿದೆ.
1982ರಲ್ಲಿ ಒಂದು ಬಾರಿ ಈ ಪ್ರದೇಶದಲ್ಲಿ ಭೂಕಂಪವಾದಂತಹ ಸಂದರ್ಭದಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಆದರೆ ಇಲ್ಲಿವರೆಗೆ ಇಷ್ಟೊಂದು ಭೂಮಿ ಕುಸಿದಿರೋದನ್ನ ನಾವ್ಯಾವತ್ತೂ ನೋಡಿಲ್ಲ ಎನ್ನುತ್ತಾರೆ ಸ್ಥಳೀಯರು. ಅಲ್ಲದೇ ರಾಜ್ಯದ ವಿವಿಧ ಕಡೆಗಳಲ್ಲಿ ಭೂ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಜಿಲ್ಲೆಯಲ್ಲೂ ಈಗ ಆತಂಕ ವ್ಯಕ್ತವಾಗಿದೆ.