ಕಾರವಾರ: ಕೊರೊನಾ ಲಸಿಕೆ ಪಡೆಯಲು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಜನರಿಗೆ ಲಸಿಕೆ ಖಾಲಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಲಸಿಕೆ ಪಡೆಯಲು ನೂರಾರು ಜನರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದ ಘಟನೆ ಇಂದು ನಗರದಲ್ಲಿ ನಡೆದಿದೆ.
ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆಯಲು ಬೆಳಗ್ಗೆಯಿಂದ ಜನ ಸಾಲುಗಟ್ಟಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ಕೇವಲ 150 ಜನರಿಗೆ ಮಾತ್ರ ಲಸಿಕೆ ನೀಡುವುದಾಗಿ ಸಿಬ್ಬಂದಿ ತಿಳಿಸಿದ್ದರಾದರೂ ಜನ ಲಸಿಕೆಗಾಗಿ ಕಾದು ನಿಂತಿದ್ದರು. ಕೊನೆಗೆ 150 ಜನರಿಗೆ ಲಸಿಕೆ ಹಾಕಿದ ಬಳಿಕ ಬಾಗಿಲು ಬಂದ್ ಮಾಡಲು ಮುಂದಾಗಿದ್ದರು. ಈ ವೇಳೆ ಲಸಿಕೆಗಾಗಿ ಕಾದು ಕುಳಿತಿದ್ದವರು ಬಾಗಿಲು ಬಂದ್ ಮಾಡಲು ಬಿಡದೆ ಆಸ್ಪತ್ರೆ ಒಳಭಾಗಕ್ಕೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಿಬ್ಬಂದಿ ಅವರನ್ನು ತಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿನಿತ್ಯ 30ಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಆದರೆ, ಇಂದು ಕೇವಲ 150 ಜನರಿಗೆ ವ್ಯಾಕ್ಸಿನ್ ನೀಡುವುದಾಗಿ ತಿಳಿಸುತ್ತಿದ್ದಾರೆ. ಯಾವಾಗ ಬಂದರೂ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂದು ತಿಳಿಸಲಾಗುತ್ತಿದೆ. ನಾವು ಕೆಲಸ ಕಾರ್ಯವನ್ನು ಬಿಟ್ಟು ಸಾಲುಗಟ್ಟಿ ನಿಂತಿದ್ದರೂ ಪ್ರಯೋಜನವಾಗುತ್ತಿಲ್ಲ. ಈಗ ಬಂದವರಿಗೆ ವ್ಯಾಕ್ಸಿನ್ ನೀಡುವಂತೆ ವ್ಯಾಕ್ಸಿನ್ ಪಡೆಯಲು ಬಂದವರು ಪಟ್ಟು ಹಿಡಿದಿದ್ದರು.
ಇದನ್ನೂ ಓದಿ: Murder: ಬೆಂಗಳೂರಲ್ಲಿ ಕಿರುಕುಳ ತಾಳದೆ ಪತಿಯ ಹತ್ಯೆಗೆ ಪತ್ನಿಯೇ ಕೊಟ್ಟಳಾ ಸುಪಾರಿ?