ಕಾರವಾರ(ಉತ್ತರಕನ್ನಡ): ಕೆಲ ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಬಿಟ್ಟೂಬಿಡದೇ ಗಾಳಿಸಹಿತ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆಗಾಲ ಪೂರ್ವದಲ್ಲಿ ಬೆಳೆಯುವ ಭತ್ತ ಇನ್ನೇನು ಕೈ ಸೇರುವ ಹೊತ್ತಿಗೆ ಮಣ್ಣುಪಾಲಾಗುವಂತಾಗಿದೆ.
ಜಿಲ್ಲೆಯ ಶಿರಸಿ, ಸಿದ್ದಾಪುರ, ಹೊನ್ನಾವರ, ಯಲ್ಲಾಪುರ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಭತ್ತ (ಕಾರು ಭತ್ತ/ಕಾರ್ಗದ್ದೆಯಲ್ಲಿ ಬೆಳೆಯುವ ಭತ್ತ) ಬಹುತೇಕ ನೀರು ಪಾಲಾಗಿದೆ. ಗದ್ದೆ ಕೊಯ್ಲಿನ ವೇಳೆಯಲ್ಲಿ ಸರಿಯಾಗಿ ಮಳೆ ಸುರಿಯಲಾರಂಭಿಸಿದ್ದು, ಸಿದ್ದಾಪುರದ ದೊಡ್ಮನೆ ವ್ಯಾಪ್ತಿಯ ಸಾವಲಗದ್ದೆ, ಬಿಳೆಗೋಡ ಸೇರಿದಂತೆ ಹಲವೆಡೆ ಗದ್ದೆಯಲ್ಲಿಯೇ ಭತ್ತ ಮೊಳಕೆಯೊಡೆದಿದೆ. ಕೆಲವೆಡೆ ಗದ್ದೆ ಹಸಿಯಾಗಿಯೇ ಇದ್ದು ಮುಂದಿನ ಮಳೆ ಆತಂಕದಲ್ಲಿ ಹಸಿ ಭತ್ತವನ್ನೇ ಕೊಯ್ದು ಜೋಪಾನ ಮಾಡುವಲ್ಲಿ ರೈತರು ನಿರತರಾಗಿದ್ದಾರೆ.
ಮಳೆಗಾಲದಲ್ಲಿ ಜಾನುವಾರುಗಳಿಗೆ ಭತ್ತದ ಹುಲ್ಲನ್ನೇ ಕೊಡಲಾಗುತ್ತದೆ. ಈ ಬಾರಿ ಹಸಿ ಭತ್ತವನ್ನೇ ಕೊಯ್ದ ಕಾರಣ ಒಣಗಿಸಲು ಸಾಧ್ಯವಾಗದೇ ಹುಲ್ಲು ಹಾಳಾಗಿದೆ. ಈ ರೀತಿ ಕಪ್ಪಾದ ಹುಲ್ಲನ್ನು ಸದ್ಯ ಒಣಗಿಸಲು ಪ್ರಯತ್ನಿಸಲಾಗುತ್ತಿದೆಯಾದರೂ ಇದನ್ನು ಜಾನುವಾರುಗಳು ತಿನ್ನುವುದಿಲ್ಲ. ಇದೀಗ ಹುಲ್ಲಿನ ದರ ಕೂಡ ಗಗನಕ್ಕೇರಿದ್ದು ಜಾನುವಾರುಗಳಿಗೆ ಹುಲ್ಲು ಹುಡುಕುವುದು ಹೇಗೆ ಎಂಬ ಚಿಂತೆ ಕಾಡುತ್ತದೆ ಎನ್ನುತ್ತಾರೆ ರೈತ ಮಾರುತಿ ಗೌಡ.
ಮಳೆ ಹಾನಿ ಕುರಿತು ಸಮೀಕ್ಷೆ ನಡೆಸುತ್ತಿರುವ ಕೃಷಿ ಇಲಾಖೆ ಜಿಲ್ಲೆಯಲ್ಲಿ ಒಟ್ಟು 250ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮೆಕ್ಕೆ ಜೋಳ ಹಾನಿಯಾಗಿರುವುದಾಗಿ ವರದಿ ತಯಾರಿಸಿದೆ. ಆದರೆ ಅಸಲಿಯಾಗಿ ಇನ್ನೂ ಹೆಚ್ಚಿನ ಹಾನಿ ಸಂಭವಿಸಿದೆ. ಬಹುತೇಕ ಭಾಗದಲ್ಲಿ ಬೆಳೆ ಹಾನಿಯಾದರೂ ಯಾರೊಬ್ಬರೂ ಬಂದು ನೋಡಿಲ್ಲ. ನಮ್ಮ ಭಾಗದಲ್ಲಿಯೂ ಸಾಕಷ್ಟು ಹಾನಿಯಾಗಿದ್ದು, ಬೆಳೆದ ಬೆಳೆ ಬಳಸಲಾಗದ ಸ್ಥಿತಿ ಇದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಗಂಗಾಧರ ನಾಯ್ಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಜೂನ್ 5ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ
ಮಳೆ ಪರಿಣಾಮ ಸುಮಾರು 42 ಮನೆಗಳು ಹಾನಿಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಎಂಟು ಜಾನುವಾರುಗಳು ಸಾವನ್ನಪ್ಪಿವೆ. ಅದೆಷ್ಟೋ ವಿದ್ಯುತ್ ಕಂಬಗಳು ಧರೆಗುರುಳಿದ್ದು ಮನೆ, ವಸತಿ ಶಾಲೆಗಳ ಮೇಲ್ಛಾವಣಿಗಳು ಹಾರಿಹೋಗಿ ಲಕ್ಷಾಂತರ ರೂ. ನಷ್ಟವಾಗಿದೆ.