ಶಿರಸಿ: ಸಿಡಿಲು ಬಡಿದ ಪರಿಣಾಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ರೈತರು ತೀವ್ರವಾಗಿ ಅಸ್ವಸ್ಥಗೊಂಡು, ಒಂದು ಜಾನುವಾರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಸಿಡಿಲು-ಮಿಂಚು ಸಹಿತ ಭಾರಿ ಮಳೆ ಸುರಿದಿದ್ದು, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ತಮ್ಮ ಗದ್ದೆಯಲ್ಲಿ ಬಿತ್ತನೆ ಮಾಡುತ್ತಿದ್ದ ನಿಜಗುಣಿ ಯಲ್ಲಪ್ಪ ಹುಲಿಹೊಂಡ (25), ಯಲ್ಲಪ್ಪ ಸಿದ್ದಪ್ಪ ಹುಲಿಹೊಂಡ (55) ಹಾಗೂ ಯಲ್ಲವ್ವ ದೇವೇಂದ್ರಪ್ಪ ಬೆಣ್ಣಿ (45) ಎಂಬ ಮೂವರು ರೈತರು ಸಿಡಿಲಿನ ಶಾಖದಿಂದ ಆಘಾತಗೊಂಡಿದ್ದಾರೆ. ಎಲ್ಲರನ್ನೂ ತಕ್ಷಣವೇ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ತಾಸಿಗೂ ಅಧಿಕ ಕಾಲ ಮಳೆ ಸುರಿದಿದ್ದು, ಸಿಡಿಲಿನ ಆರ್ಭಟಕ್ಕೆ ಒಂದು ಎತ್ತು ಬಲಿಯಾಗಿದೆ. ಅಲ್ಲದೇ ನಗರ ಮತ್ತು ಗ್ರಾಮೀಣ ಭಾಗದ ಮನೆಗಳಿಗೆ ಹಾನಿಯಾಗಿದ್ದು, ಮರ-ಗಿಡಗಳು ರಸ್ತೆ ಮೇಲೆ ಮುರಿದು ಬಿದ್ದು ಸಂಚಾರವೂ ಅಸ್ತವ್ಯಸ್ಥವಾಗಿತ್ತು.