ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಅಂಕೋಲಾ ಭಾಗದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದ್ದು, ಜನ ಭಯದಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲಿಯೂ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ. ಗಂಗಾವಳಿ ಸಮೀಪವೇ ಇರುವ ಬಿಳಿಹೊಯ್ಗೆಯಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಮನೆಗಳ ಅಂಗಳಕ್ಕೆ ನೀರು ಬಂದಿದೆ.
ಅಗತ್ಯ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರ ಆಗ್ರಹ: ಅಲ್ಲದೇ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿದೆ. ಇನ್ನು ಈ ಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರವಾಹ ಎದುರಾಗಿರುವ ಕಾರಣ, ಜನ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಾಗಿದೆ. ಗಂಗಾವಳಿ ನದಿ ಸಮೀಪದ ದಂಡೆ ಭಾಗದಲ್ಲಿ ಖಾರ್ಲ್ಯಾಂಡ್ ಒಡ್ಡು ಒಡೆದ ಪರಿಣಾಮ ಕಳೆದ 4 ವರ್ಷದಿಂದ ನಿರಂತರವಾಗಿ ನೆರೆ ಹಾವಳಿ ಸೃಷ್ಟಿಯಾಗುವಂತಾಗಿದೆ. ಕೂಡಲೇ ಖಾರ್ಲ್ಯಾಂಡ್ ಸರಿಪಡಿಸಿ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ ಆರ್ಭಟ: ಪರೀಕ್ಷೆ ಹಿನ್ನೆಲೆ ಅಪಾಯಕಾರಿ ಸ್ಥಿತಿಯಲ್ಲೇ ಸಂಚರಿಸಿದ ಪದವಿ ವಿದ್ಯಾರ್ಥಿಗಳು
ಮನೆಯ ಸಾಮಗ್ರಿಗಳನ್ನು ಬೇರೆಡೆ ಸ್ಥಳಾಂತರಿಸುತ್ತಿರುವ ಜನ: ಇನ್ನು ನಿರಂತರವಾಗಿ ನೆರೆ ಏರಿಕೆಯಾಗುತ್ತಿರುವ ಕಾರಣ, ಜನ ಕೂಡ ಮನೆಗಳಲ್ಲಿನ ಪ್ರಮುಖ ಅಕ್ಕಿ, ಬಟ್ಟೆ, ಬಂಗಾರ ಸೇರಿದಂತೆ ಇತರ ವಸ್ತುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದಾರೆ. ಜೊತೆಗೆ ಇನ್ನುಳಿದ ವಸ್ತುಗಳನ್ನು ನೀರು ಹೆಚ್ಚಾದಲ್ಲಿ ಅವುಗಳನ್ನು ಸಾಗಣೆ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ನೀರು ಹೆಚ್ಚಾದಲ್ಲಿ ಮಾತ್ರ ಮನೆ ಬಿಟ್ಟು ಹೋಗುವುದಕ್ಕೆ ಮುಂದಾಗಿದ್ದಾರೆ. ಇನ್ನು ನೆರೆ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಸಿಬ್ಬಂದಿ ಮನೆ ಮನೆಗೆ ತೆರಳಿ ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಿಳಿಸುತ್ತಿದ್ದಾರೆ.
ರಜೆ ನಡುವೆಯೂ ಕೆಲಸ ಮಾಡುತ್ತಿರುವ ಅಧಿಕಾರಿಗಳು: ಶಾಲೆಗಳಲ್ಲಿ ಕಾಳಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು, ನೆರೆ ಹೆಚ್ಚಾದಲ್ಲಿ ಜನರ ಸಾಗಾಟಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಈ ರೀತಿ ಸಮಸ್ಯೆಯಾಗುತ್ತಿದ್ದು, ನಾವೆಲ್ಲರೂ ರಜೆ ನಡುವೆಯೂ ಕೆಲಸ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆಗಳು ಸಂಪೂರ್ಣ ಜಲಾವೃತಗೊಳ್ಳುವ ಆತಂಕ: ಒಟ್ಟಾರೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು, ಕೆಲ ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಇದೇ ರೀತಿ, ಮಳೆ ಮುಂದುವರೆದಲ್ಲಿ ಮನೆಗಳು ಸಂಪೂರ್ಣ ಜಲಾವೃತಗೊಳ್ಳುವ ಆತಂಕ ಇದೀಗ ಸ್ಥಳೀಯರಿಗೆ ಎದುರಾಗಿದೆ.
ಇದನ್ನೂ ಓದಿ: ಮುಂದುವರಿದ ವರುಣನ ಆರ್ಭಟ: ಧರೆಗುರುಳಿದ ಮನೆಗಳು, ಜನಜೀವನ ಅಸ್ತವ್ಯಸ್ತ..! ಹೀಗಿದೆ ಜಲಾಶಯಗಳ ನೀರಿನ ಮಟ್ಟ!