ಕಾರವಾರ: ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯೋರ್ವನ ಶವವನ್ನು ಜನ ಸಂಚಾರವಿರುವ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಶಿರಸಿ ಮೂಲದ 42 ವರ್ಷದ ವ್ಯಕ್ತಿಯೋರ್ವ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ನಗರದ ವಾರ್ಡ್ ನಂ 7ರ ಸರ್ವೋದಯ ನಗರದ ಬಳಿ ಇರುವ ಸ್ಮಶಾನದಲ್ಲಿ ನಿನ್ನೆ ಅಂತ್ಯ ಸಂಸ್ಕಾರಕ್ಕೆ ನಗರಸಭೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸುತ್ತಮುತ್ತಲಿನ 18 ವಾರ್ಡ್ಗಳ ಮೃತದೇಹಗಳನ್ನು ಇದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವುದರಿಂದ ಸ್ಥಳೀಯರು ಇಲ್ಲಿ ನಡೆಸಲು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಬಿಣಗಾ ಬಳಿಯ ಸಂಕ್ರುಭಾಗದ ಅರಣ್ಯ ಪ್ರದೇಶದಲ್ಲಿ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಪ್ರದೇಶ ಹೆದ್ದಾರಿಗೆ ಹತ್ತಿರವಿದ್ದು, ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೂಲಿ ಕಾರ್ಮಿಕರು ನಿತ್ಯ ಓಡಾಡುವ ಪ್ರದೇಶವಾಗಿದೆ. ಮೃತದೇಹವನ್ನು ನೀರು ಹರಿಯುವ ಪ್ರದೇಶದಲ್ಲಿಯೇ ಸುಡಲಾಗಿದ್ದು, ಅದು ಕೂಡ ಅರೆಬರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅರೆಬರೆ ಅಂತ್ಯಸಂಸ್ಕಾರ ನಡೆಸಿರುವ ಬಗ್ಗೆ ತಿಳಿಯುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಪುನಃ ಬಂದು ಅಂತ್ಯ ಸಂಸ್ಕಾರ ನಡೆಸಿದ ಸ್ಥಳವನ್ನು ಜೆಸಿಬಿ ಮೂಲಕ ಮಣ್ಣಿನಿಂದ ಮುಚ್ಚಿದ್ದಾರೆ. ಆದರೆ ಇದೀಗ ಮಳೆ ಬಂದಲ್ಲಿ ಮಣ್ಣು ಕೊಚ್ಚಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಅವರನ್ನು ಕೇಳಿದರೆ ಮೃತಪಟ್ಟ ವ್ಯಕ್ತಿಯನ್ನು ನಗರದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲು ವಿರೋಧ ವ್ಯಕ್ತವಾದ ಬಳಿಕ ಅರಣ್ಯ ಪ್ರದೇಶದಲ್ಲಿ ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ ನಡೆಸಿದ್ದೇವೆ. ಆದರೆ ಇದೀಗ ಕೆಲವರು ದಾರಿಗೆ ಹತ್ತಿರವಿರುವುದಾಗಿ ಹೇಳುತ್ತಿದ್ದಾರೆ. ಎಲ್ಲ ರೀತಿಯ ಮುಂಜಾಗೃತ ಕ್ರಮದೊಂದಿಗೆ ಅಂತ್ಯ ಸಂಸ್ಕಾರ ನಡೆಸಿದ್ದು ಯಾರು ಕೂಡ ಭಯಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ ತೀವ್ರ ಆತಂಕ ಸೃಷ್ಟಿಸಿರೊ ಕೊರೊನಾ ಸೋಂಕು ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೂ ಅಡ್ಡಿಯಾಗಿ ಅರಣ್ಯ ಪ್ರದೇಶದಲ್ಲಿ ಸುಡಲಾಗಿದೆ. ಆದರೆ ಜನವಸತಿ ಪ್ರದೇಶದಲ್ಲಿ ಅರೆಬರೆ ಸುಟ್ಟಿರುವ ಆರೋಪ ಇದ್ದು ಅಧಿಕಾರಿಗಳು ಪರಿಶೀಲಿಸಿ ಜನರ ಆತಂಕ ನಿವಾರಿಸಬೇಕಾಗಿದೆ.