ಶಿರಸಿ : ಒಲಿಂಪಿಕ್ ‘ಚಿನ್ನದ ವೀರ’ ನೀರಜ್ ಚೋಪ್ರಾ ಹಿಂದಿನ ಶಕ್ತಿ ಉತ್ತರ ಕನ್ನಡ ಜಿಲ್ಲೆಯ ಯೋಧ ಎಂಬುದು ಈಗ ಜಿಲ್ಲೆಗೆ ಹೆಮ್ಮೆಯ ಸಂಗತಿ. ಒಲಿಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದವನಿಗೆ, ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ ಕಾಶಿನಾಥ ನಾಯ್ಕ್ ಅವರು ಮೊದಲು ತರಬೇತಿ ನೀಡಿದ್ದರು.
ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶಿನಾಥ್, ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರಾಗಿದ್ದಾರೆ. 23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ, 2010ರ ನವದೆಹಲಿಯ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು.
2015ರಲ್ಲಿ ಕಾಶಿನಾಥ ನಾಯ್ಕರ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ, ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.
ನೀರಜ್ ಚೋಪ್ರಾ ಚಿನ್ನದ ಪದಕ ವಿಜೇತರಾಗಿರುವ ಬಗ್ಗೆ ಸಂತಸ ಹಂಚಿಕೊಂಡ ಕಾಶಿನಾಥ ನಾಯ್ಕ, 2016ರಲ್ಲೇ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ, ತುಂಬ ಉತ್ತಮ ಕ್ರೀಡಾಪಟು ಈತ ಎಂದು ಹೇಳಿದ್ದಾರೆ. 'ನೀರಜ್ ಚೋಪ್ರಾನಿಗೆ ಪ್ರತಿಭೆ ದೇವರು ಕೊಟ್ಟ ವರ' ಎಂದು ತಾನು ತರಬೇತಿ ನೀಡಿದ ಕುರಿತು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ.
ಜಾವೆಲಿನ್ ಥ್ರೋನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಇದು ಟೋಕಿಯೋ ಒಲಿಂಪಿಕ್ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರವಾಗಿದ್ದು, ಇಡೀ ದೇಶ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ 23ರ ಹರೆಯದ ನೀರಜ್ ಜೋಪ್ರಾ.