ಕಾರವಾರ : ಕಳೆದ ಒಂದೂವರೆ ತಿಂಗಳ ಹಿಂದೆ ಹೊನ್ನಾವರದ ಕಾಸರಕೋಡು ಟೊಂಕಾ ಕಡಲತೀರದ ಬಳಿ ಪತ್ತೆಯಾಗಿದ್ದ ಕಡಲಾಮೆಯ ಮೊಟ್ಟೆಯಿಂದ 200ಕ್ಕೂ ಹೆಚ್ಚು ಮರಿಗಳು ಹೊರ ಬಂದಿದ್ದವು. ಇಂದು ಅವುಗಳನ್ನು ಸುರಕ್ಷಿತವಾಗಿ ಕಡಲಿಗೆ ಬಿಡಲಾಯಿತು.
ಅಳಿವಿನಂಚಿನಲ್ಲಿರುವ "ಆಲಿವ್ ರೆಡ್ಲಿ" ಜಾತಿಗೆ ಸೇರಿರುವ ಕಡಲಾಮೆಯ ಮೊಟ್ಟೆಗಳು ಕಳೆದ 45 ದಿನಗಳ ಹಿಂದೆ ಟೊಂಕಾ ಕಡಲತೀರದ ಬಳಿ ಪತ್ತೆಯಾಗಿದ್ದವು. ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಕೃತಕವಾಗಿ ಕಾವು ನೀಡಲಾಗಿತ್ತು. ಶನಿವಾರ ರಾತ್ರಿ ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿದ್ದು, ಇಂದು ಅರಣ್ಯಾಧಿಕಾರಿಗಳ ಸೂಚನೆಯಂತೆ ಸುರಕ್ಷಿತವಾಗಿ ಕಡಲಿಗೆ ಬಿಡಲಾಗಿದೆ.
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಸದಸ್ಯ ಡಾ. ಪ್ರಕಾಶ್ ಮೇಸ್ತ, ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ್, ಕಾರವಾರ ಕಡಲ ಜೀವ ಶಾಸ್ತ್ರದ ಸ್ನಾತಕೊತ್ತರ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಮೀನುಗಾರರ ಮಕ್ಕಳು ಹಾಗೂ ಮಹಿಳೆಯರು ಪಾಲ್ಗೊಂಡು ಕಡಲಾಮೆ ಮರಿಗಳನ್ನು ಕಡಲಿಗೆ ಬಿಟ್ಟಿದ್ದಾರೆ.