ಶಿರಸಿ: ಓದುವುದಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತನ್ನು ಶಿರಸಿಯ ನಾರಾಯಣ ಭಟ್ ಅಕ್ಷರಶಃ ನಿರೂಪಿಸಿದ್ದಾರೆ. ಇವರು ತಮ್ಮ 71 ರ ಇಳಿವಯಸ್ಸಿನಲ್ಲೂ ಇಲ್ಲಿನ ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಕಾಲೇಜಿಗೆ ತೆರಳಿ, ಪಾಠ ಕೇಳಿ ಪರೀಕ್ಷೆ ಬರೆದು ಇದೀಗ ರಾಜ್ಯಕ್ಕೆ ಮೊದಲ ರ‍್ಯಾಂಕ್ ಸಾಧನೆ ಮಾಡಿದ್ದಾರೆ.
ನವೆಂಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ತಾಂತ್ರಿಕ ಶಿಕ್ಷಣ ಸಚಿವರು ಇವರನ್ನು ಗೌರವಿಸಲಿದ್ದಾರೆ.
ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದರು. ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ (ಆಗಿನ ಬಿಲ್ಟ್, ಈಗಿನ ಗ್ರಾಸಿಮ್ ಇಂಡಸ್ಟ್ರೀಸ್) ನೌಕರಿಗೆ ಸೇರಿಕೊಂಡಿದ್ದರು. 1993ರವರೆಗೆ ಕರ್ತವ್ಯ ನಿರ್ವಹಿಸಿದ ನಂತರ ಗುಜರಾತ್ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿ, ಶಿರಸಿಗೆ ಬಂದು ನಿವೃತ್ತಿ ಜೀವನ ಕಳೆಯುತ್ತಿದ್ದರು. ಸುಮ್ಮನೆ ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಉದ್ದೇಶದಿಂದ ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಬಯಸಿ 2019ರಲ್ಲಿ ದಾಖಲಾತಿ ಪಡೆದುಕೊಂಡಿದ್ದರು.
ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್ಗೆ ನಿತ್ಯ ತರಗತಿಗೆ ಹಾಜರಾಗುತ್ತಾ, ಪ್ರಥಮ ವರ್ಷದಲ್ಲಿ ಶೇ 91 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದ ಭಟ್ಟರು, ಅಂತಿಮವಾಗಿ 94.88% ಫಲಿತಾಂಶದೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ಯುವಕರಿಗೆ ಮಾದರಿ: ನಾರಾಯಣ ಭಟ್ಟರ ಬಗ್ಗೆ ಕಾಲೇಜಿನಲ್ಲಿ ವಿಧೇಯ, ಆದರ್ಶ ವಿದ್ಯಾರ್ಥಿ ಎಂಬ ಅಭಿಪ್ರಾಯವಿದೆ. ಅಷ್ಟೇ ಅಲ್ಲ, ಒಂದು ದಿನವೂ ತರಗತಿಗೆ ಗೈರಾಗದೆ, ಸಮವಸ್ತ್ರ ಇಲ್ಲದೇ ಬಂದಿದ್ದಿಲ್ಲ ಎಂಬುದು ಕಾಲೇಜು ಪ್ರಾಧ್ಯಾಪಕರ ಮೆಚ್ಚುಗೆಯ ನುಡಿ.
ಇದನ್ನೂ ಓದಿ: ಬುದ್ಧಿಮತ್ತೆ ಪರೀಕ್ಷೆಯಲ್ಲಿ ಬಾಲಕನ ಸಾಧನೆ : ದೇಶಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪುರಸ್ಕಾರ