ಕಾರವಾರ: ಆತ 57 ವರ್ಷದ ವೃದ್ಧ. ಅಭಿವೃದ್ಧಿ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ, ನೀರಿನ ಅಭಾವ ಕಂಡು ಮನನೊಂದಿದ್ದು, ಇದಕ್ಕಾಗಿ ತಾನು ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದ. ಈ ನಿಟ್ಟಿನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ಮೂಲಕ ಆ ವೃದ್ಧ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾನೆ. ದೇಶ ಸುತ್ತುವರೆಯುವ ಗುರಿ ಹೊಂದಿರುವ ಆ ವೃದ್ಧ ಜಾಗೃತಿ ಮೂಡಿಸುತ್ತಿರುವುದಾದರೂ ಹೇಗೆ ಅಂತೀರಾ? ಇಲ್ಲಿದೆ ನೋಡಿ..
ಒಂದೆಡೆ ಬಿಸಿಲಿನಲ್ಲಿ ಏಕಾಂಗಿಯಾಗಿ ಸೈಕಲ್ ತುಳಿಯುತ್ತಾ, ರಸ್ತೆಯಲ್ಲಿ ಸಿಕ್ಕ ಜನರೊಂದಿಗೆ ಮಾತನಾಡುತ್ತಾ ಜಾಗೃತಿ ಮೂಡಿಸುತ್ತಿರುವ ವೃದ್ಧ. ಮತ್ತೊಂದೆಡೆ ಸೈಕಲ್ ಮೇಲೆ ಬಂದಿರುವ ವೃದ್ಧನನ್ನ ಕುತೂಹಲದಿಂದ ವೀಕ್ಷಿಸುತ್ತಿರುವ ಸಾರ್ವಜನಿಕರು. ಈ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.
ಯಾರು ಈ ವೃದ್ಧ?:
ಹೀಗೆ ಸೈಕಲ್ ತುಳಿದುಕೊಂಡು ನಗರಕ್ಕೆ ಆಗಮಿಸಿರುವ ವ್ಯಕ್ತಿಯ ಹೆಸರು ಪೊರಿಮಲಿ ಕಾಂಜಿ. ಪಶ್ಚಿಮ ಬಂಗಾಳ ಮೂಲದವರು. 57 ವರ್ಷದ ಪೊರಿಮಲಿ ಕಾಂಜಿ 'ಮರಗಳನ್ನ ಉಳಿಸಿ, ನೀರನ್ನ ಸಂರಕ್ಷಿಸಿ' ಎನ್ನುವ ಘೋಷ ವಾಕ್ಯದೊಂದಿಗೆ ಸೈಕಲ್ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಜ.1ರಿಂದ ಸೈಕಲ್ ಯಾತ್ರೆ:
ಪೊರಿಮಲಿ ಕಾಂಜಿ 2021ರ ಜ.1ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ಸೈಕಲ್ ಯಾತ್ರೆಯನ್ನ ಆರಂಭಿಸಿದ್ದು, ಅಲ್ಲಿಂದ ಹೆದ್ದಾರಿ ಮಾರ್ಗವಾಗಿ ಕರಾವಳಿಯಾದ್ಯಂತ ಪ್ರಯಾಣಿಸುತ್ತಾ ಬಂದಿದ್ದಾರೆ. ದಿನಕ್ಕೆ 120 ಕಿಲೋ ಮೀಟರ್‌ನಂತೆ ಇದುವರೆಗೆ ಸುಮಾರು 5000 ಕಿಲೋ ಮೀಟರ್‌ಗಳನ್ನ ಸೈಕಲ್ ಮೇಲೆಯೇ ಕ್ರಮಿಸಿದ್ದು ಮಾರ್ಗಮದ್ಯೆ ಸಿಗುವ ಜನರಿಗೆ ಪರಿಸರ ರಕ್ಷಣೆ ಹಾಗೂ ನೀರನ್ನ ಉಳಿಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಜಾಗೃತಿಯ ಉದ್ದೇಶ:
ಪಶ್ಚಿಮ ಬಂಗಾಳದಲ್ಲಿ ನೀರನ್ನ ಬೇಕಾಬಿಟ್ಟಿಯಾಗಿ ಪೋಲು ಮಾಡುವುದನ್ನ ಕಂಡು ಈ ಕುರಿತು ಜಾಗೃತಿ ಮೂಡಿಸಬೇಕು ಎನ್ನುವ ಭಾವನೆ ಕಾಂಜಿ ಅವರಲ್ಲಿ ಮೂಡಿದೆ. ಅಲ್ಲದೇ ಮರಗಳನ್ನ ಬೆಳೆಸಿದಲ್ಲಿ ನೀರಿನ ಅಭಾವ ತಪ್ಪಿಸಬಹುದು ಎನ್ನುವ ನಿಟ್ಟಿನಲ್ಲಿ ಸೈಕಲ್ ಜಾಗೃತಿ ಮಾಡುತ್ತಿವುದಾಗಿ ಅವರು ತಿಳಿಸಿದ್ದಾರೆ.
ಎಲ್ಲೆಲ್ಲಿ ಜಾಗೃತಿ:
ಪಶ್ಟಿಮ ಬಂಗಾಳದಿಂದ ತನ್ನ ಪ್ರಯಾಣ ಆರಂಭಿಸಿರುವ ಪೊರಿಮಲಿ ಕಾಂಜಿ ಇದುವರೆಗೆ ಓಡಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಮಂಗಳೂರನ್ನ ದಾಟಿಕೊಂಡು ಬಂದಿದ್ದಾರೆ. ಇಂದು ಕಾರವಾರಕ್ಕೆ ಆಗಮಿಸಿದ ಅವರನ್ನ ಸಾರ್ವಜನಿಕರು ಕುತೂಹಲದಿಂದ ವಿಚಾರಿಸಿದಾಗ ಜನರೊಂದಿಗೆ ತಮ್ಮ ವಿಚಾರಗಳನ್ನ ಹಂಚಿಕೊಂಡರು.
ಅನಕ್ಷರಸ್ಥರಾದರೂ ಪರಿಸರ ಕಾಳಜಿ:
ಯಾವುದೇ ಶಿಕ್ಷಣ ಹೊಂದಿರದ ಕಾಂಜಿ ಅಲ್ಪ ಹಣದೊಂದಿಗೆ ಸೈಕಲ್ ಯಾತ್ರೆ ಆರಂಭಿಸಿದ್ದು ಮಾರ್ಗಮಧ್ಯೆ ಜನರು ನೀಡುವ ಆಹಾರ ಸೇವಿಸಿ ಜಾಗ ಸಿಕ್ಕಲ್ಲಿ ರಾತ್ರಿ ಕಳೆದು ಮತ್ತೆ ತಮ್ಮ ಪ್ರಯಾಣ ಮುಂದುವರೆಸಿಕೊಂಡು ಬಂದಿದ್ದಾರೆ. ಇಂಗ್ಲೀಷ್, ಹಿಂದಿ ಭಾಷೆಗಳನ್ನ ಮಾತನಾಡುವುದರಿಂದ ಮಾರ್ಗಗಳನ್ನ ತಿಳಿದುಕೊಳ್ಳಲು ಸಹಕಾರಿಯಾಗಿದ್ದು ಮುಂದಿನ ಆರು ತಿಂಗಳಲ್ಲಿ ಗಡಿಭಾಗದ ರಾಜ್ಯಗಳ ಪ್ರವಾಸ ಪೂರ್ಣಗೊಳಿಸಿ ತಮ್ಮ ಊರು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಜಿ ಅವರ ಮಾತುಗಳನ್ನ ಕೇಳಿದ ಸಾರ್ವಜನಿಕರು ಇಳಿ ವಯಸ್ಸಿನಲ್ಲೂ ಮುಂದಿನ ಪೀಳಿಗೆಗಾಗಿ ಪರಿಸರ ಜಾಗೃತಿ ಮೂಡಿಸುತ್ತಿರುವ ಅವರ ಹಂಬಲ ಎಂತಹವರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಸೈಕಲ್ ತುಳಿಯುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪೊರಿಮಲಿ ಕಾಂಜಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.