ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾ.ಪಂ ವ್ಯಾಪ್ತಿಯ ಕೋಟಖಂಡ ಮಾಲ್ಕಿ ಜಮೀನಿನಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದೆ.
ವಸಂತ ನಾಯ್ಕ ಮತ್ತು ಮಂಜಪ್ಪ ನಾಯ್ಕ ಮಾಲೀಕತ್ವದಲ್ಲಿ ಕಳೆದ ಮೂರು ವರ್ಷದಿಂದ ಈ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ಪರವಾನಗಿ ನವೀಕರಿಸದೆ ಗಣಿಗಾರಿಕೆ ನಡೆಸುತ್ತಿರುವುದು ತಿಳಿದು ಬಂದಿದೆ.
ಈ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರುಗಳು ಬಂದ ಹಿನ್ನೆಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ 2 ಟ್ರೈಲರ್ ಮಷಿನ್, ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ 3 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ದಾಳಿಯಲ್ಲಿ ವಶಪಡಿಸಿಕೊಂಡ ಯಂತ್ರಗಳು ಮತ್ತು ಮೂರು ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣೆ ವಶಕ್ಕೆ ನೀಡಿದ್ದಾರೆ.
ಇನ್ನು ಈ ಕಾರ್ಯಾಚರಣೆಯಲ್ಲಿ ಭೂ ಮತ್ತು ಗಣೆಗಾರಿಕೆ ಇಲಾಖೆ ಅಧಿಕಾರಿ ಜಯರಾಮ ನಾಯ್ಕ, ಕಂದಾಯ ನಿರೀಕ್ಷಕ ಕೆ ಶಂಭು, ಗ್ರಾಮ ಲೆಕ್ಕಾಧಿಕಾರಿಗಳಾದ ವಿಶ್ವನಾಥ ಗಾವಂಕರ, ಚಾಂದ್ ಬಾಷಾ ಮುಂತಾದವರು ಉಪಸ್ಥಿತರಿದ್ದರು.