ಕಾರವಾರ: ಕೇಂದ್ರ ಸರ್ಕಾರದ ಸೂಚನೆಯಂತೆ ಉಜ್ವಲ ಯೋಜನೆಯಡಿ ಗ್ರಾಹಕರಿಗೆ ಮೂರು ತಿಂಗಳು ಉಚಿತ ಸಿಲಿಂಡರ್ ಭರ್ತಿ ಹಾಗೂ ಪಡಿತರ ಚೀಟಿಯುಳ್ಳವರಿಗೆ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದ್ರ ಉಪಯೋಗ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಿಲಿಂಡರ್ ಬುಕ್ ಮಾಡಿದ ಬಳಿಕ ಗ್ರಾಹಕರ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಅದನ್ನು ತೋರಿಸಿ ವಿತರಕರಿಂದ ಗ್ಯಾಸ್ ಪಡೆಯಬಹುದಾಗಿದೆ. ಮೊದಲ ತಿಂಗಳು ಗ್ಯಾಸ್ ಪಡೆದರೆ ಮಾತ್ರ ಎರಡನೇ ಮತ್ತು ಮೂರನೇ ತಿಂಗಳ ಹಣ ಜಮಾವಣೆಯಾಗಲಿದೆ. ಒಂದೊಮ್ಮೆ ಖಾತೆಗೆ ಹಣ ಜಮಾವಣೆಯಾಗದೆ ಇದ್ದಲ್ಲಿ ಗ್ಯಾಸ್ ವಿತರಕರು ಇಲ್ಲವೇ ತೈಲ ಮಾರಾಟ ಕಂಪನಿಯ ಸಹಾಯ ವಾಣಿ (HPCL 1800-233355) ಸಂಖ್ಯೆಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು ಎಂದರು.
ಪಡಿತರ ಮೂಲಕ ಅಕ್ಕಿಯನ್ನಷ್ಟೇ ನೀಡಲಾಗಿದ್ದ ಜಿಲ್ಲೆಯ ಪಡಿತರ ಅಂಗಡಿಗಳಿಗೆ ಇದೀಗ ಗೋದಿಯನ್ನು ಸಹ ಪೂರೈಕೆ ಮಾಡಲಾಗಿದೆ. ಸರ್ಕಾರ ತುರ್ತು ಅವಶ್ಯಕತೆಗಳ ಅಡಿಯಲ್ಲಿ ಪಡಿತರ ಸರಬರಾಜಿಗೆ ಅವಕಾಶ ನೀಡಿದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಗೆ ಗೋದಿ ಪೂರೈಕೆಯಾಗಿದ್ದು, ಸರ್ಕಾರದ ಆದೇಶದಂತೆ ಎರಡು ತಿಂಗಳ ಪಡಿತರವನ್ನ ಒಟ್ಟಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.