ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗಬೇಕು ಎಂದು ಸಾವಿರಾರು ಜನರು ಹೋರಾಟ ನಡೆಸಿದ್ದಾರೆ. ಆದರೆ, ಆಸ್ಪತ್ರೆಯ ಅಗತ್ಯತೆಯ ಕುರಿತು ಈವರೆಗೂ ಆರೋಗ್ಯ ಅಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಕೇಳಲಾದ ಪ್ರಶ್ನೆಯೊಂದರಿಂದ ಬಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜನರು ಸುಸಜ್ಜಿತ ಆಸ್ಪತ್ರೆಗಾಗಿ ಮೊದಲ ಬಾರಿಗೆ 08 ಜೂನ್ 2019 ರಂದು ಟ್ವಿಟರ್ ಮೂಲಕ ದೊಡ್ಡ ಅಭಿಯಾನ ನಡೆಸಿದ್ದರು. ಆಸ್ಪತ್ರೆಗೆ ಆಗ್ರಹಿಸಿ ಲಕ್ಷಾಂತರ ಟ್ವೀಟ್ ಸಲ್ಲಿಕೆಯಾಗಿದ್ದವು. ಮುಖ್ಯಮಂತ್ರಿ, ಆರೋಗ್ಯ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಜನ ಟ್ವೀಟ್ ಅಭಿಯಾನ ನಡೆಸಿದ್ದರು.
![super speciality hospital](https://etvbharatimages.akamaized.net/etvbharat/prod-images/kn-kwr-01-bayalada-satya-ka10044_21112022081949_2111f_1668998989_193.jpg)
ಇದಕ್ಕೆ ಟ್ವಿಟ್ಟರ್ ಮೂಲಕವೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು, 'ಉತ್ತರ ಕನ್ನಡ ಜಿಲ್ಲೆಯ ಜನ ಸುಸಜ್ಜಿತ ಆಸ್ಪತ್ರೆಯ ಅಗತ್ಯಕ್ಕಾಗಿ ಅಭಿಯಾನ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದರು. ಆದರೆ, ಇದಾಗಿ ಮೂರುವರೆ ವರ್ಷ ಕಳೆದರೂ ಆರೋಗ್ಯ ಅಧಿಕಾರಿಗಳ ವರದಿ ಮಾತ್ರ ಮುಖ್ಯಮಂತ್ರಿ ಸಚಿವಾಲಯವನ್ನು ತಲುಪಿಲ್ಲ.
ಇದನ್ನೂ ಓದಿ: ಉತ್ತರ ಕನ್ನಡ ಜನತೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಹೆಚ್ಡಿಕೆ ಬೆಂಬಲ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ವರದಿಯ ಪ್ರತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅಚ್ಯುತಕುಮಾರ ಯಲ್ಲಾಪುರ ಎಂಬುವರು ಸಲ್ಲಿಸಿದ ಅರ್ಜಿಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಾ, 'ಮುಖ್ಯಮಂತ್ರಿ ಸಚಿವಾಲಯಕ್ಕೆ ಆರೋಗ್ಯಾಧಿಕಾರಿಗಳಿಂದ ಯಾವುದೇ ವರದಿ ಸಲ್ಲಿಕೆಯಾಗಿಲ್ಲ' ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ: ಕುಮಟಾದಲ್ಲಿ ಬೃಹತ್ ಪಾದಯಾತ್ರೆ
ಇದಕ್ಕೂ ಮುನ್ನ, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿ ಹಿಂಪಡೆಯುವಂತೆ ಅರ್ಜಿದಾರರಿಗೆ ಒತ್ತಡ ಹೇರಲಾಗಿದ್ದು, ಅವಧಿ ಮುಗಿದರೂ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಆದರೆ, ಮೇಲ್ಮನವಿ ಸಲ್ಲಿಕೆ ನಂತರ ಅಂದರೆ, ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಸಮೀಪಿಸಿದಾಗ ಹಳೆಯ ದಿನಾಂಕದೊಂದಿಗೆ ಶನಿವಾರ ಇಮೇಲ್ ಮೂಲಕ 'ವರದಿ ಸಲ್ಲಿಕೆಯಾಗಿಲ್ಲ' ಎಂಬ ಉತ್ತರ ನೀಡಲಾಗಿದೆ. ಈ ಬಗ್ಗೆ ಶನಿವಾರ ಈಮೇಲ್ ಮಾಡಲಾಗಿದೆಯಾದರೂ ಕೂಡ 6 ಸೆಪ್ಟೆಂಬರ್ 2022 ರ ನಂತರ ಏನಾದರೂ ಪ್ರಸ್ತಾವನೆ ಸಲ್ಲಿಕೆಯಾಗಿದೆಯೋ ಇಲ್ಲವೊ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಇದರಿಂದ ಜನರ ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಅರ್ಜಿದಾರ ಅಚ್ಯುತಕುಮಾರ ಯಲ್ಲಾಪುರ ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವರಿಂದ ಮಹತ್ವದ ಸಭೆ