ಕಾರವಾರ : ಬುಡಕಟ್ಟು ಸಮುದಾಯಗಳ ಜೀವನ ಶೈಲಿ, ಕಲೆ, ಸಂಸ್ಕೃತಿ ತೋರಿಸಲು 3 ವರ್ಷದ ಹಿಂದೆ ನಿರ್ಮಿಸಿರುವ ರಾಕ್ ಗಾರ್ಡನ್ ಇದೀಗ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಂತಾಗಿದೆ.
ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಕಡಲ ತೀರದ ಬಳಿ 2018ರಲ್ಲಿ 'ರಾಕ್ ಗಾರ್ಡನ್' ನಿರ್ಮಿಸಲಾಗಿತ್ತು. ಜಿಲ್ಲೆಯಲ್ಲಿ ಶತಮಾನಗಳಿಂದಲೂ ತಮ್ಮದೇ ಜೀವನ ಶೈಲಿಯಲ್ಲಿ ಬದುಕು ಕಟ್ಟಿಕೊಂಡಿರುವ ಹಾಲಕ್ಕಿ, ಸಿದ್ದಿ, ಗೌಳಿ, ಮುಕ್ರಿ, ಕುಣಬಿ, ಹಸಲ, ಗೊಂಡಾ ಹೀಗೆ ಹತ್ತಾರು ಬುಡಕಟ್ಟು ಸಮುದಾಯಗಳ ಆಚಾರ ವಿಚಾರ, ಜೀವನ ಶೈಲಿ, ಕಲೆ, ಸಂಸ್ಕೃತಿಗಳನ್ನು ಕಲಾಕೃತಿಗಳ ಮೂಲಕ ಕಲ್ಲಿನ ಕೋಟೆಯಂತೆ ರೂಪುಗೊಂಡಿರುವ 'ರಾಕ್ ಗಾರ್ಡನ್'ನಲ್ಲಿ ಪರಿಚಯಿಸಲಾಗಿತ್ತು.
ಗಾರ್ಡನ್ ನೋಡಲು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಜನಸಾಗರವೇ ಹರಿದು ಬರುತಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಕಳೆದ ಕೆಲ ತಿಂಗಳಿಂದ ಬಂದ್ ಆಗಿದ್ದ 'ರಾಕ್ ಗಾರ್ಡನ್' ನಿರ್ವಹಣೆ ಇಲ್ಲದೆ, ಕಲಾಕೃತಿಗಳು ಬಣ್ಣ ಕಳೆದುಕೊಂಡು ಕಪ್ಪಾಗಿವೆ. ಕೆಲ ಕಲಾಕೃತಿಗಳ ಭಾಗಗಳು ಮುರಿದಿದ್ದು, ಅವುಗಳ ನೈಜ ಸ್ವರೂಪವನ್ನೇ ಬದಲಿಸುವಂತಾಗಿದೆ.
ಗುಡಿಸಲುಗಳ ಮೇಲೆ ಮರಗಳು ಬಿದ್ದು ಸುತ್ತಲು ಹುಲ್ಲು ಬೆಳೆದು, ನಿರ್ವಹಣೆ ಇಲ್ಲದೆ ಸುಂದರ ಪ್ರವಾಸಿ ತಾಣವನ್ನು ಹಾಳುಗೆಡವಲಾಗುತ್ತಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಕ್ ಗಾರ್ಡನ್ ಲೋಕಾರ್ಪಣೆಗೊಂಡ 2018-19ರಲ್ಲಿ ಸುಮಾರು 2.13 ಲಕ್ಷ, 2019-20 ರಲ್ಲಿ 1.48 ಲಕ್ಷ ಹಾಗೂ 2020-21ರಲ್ಲಿ 24 ಸಾವಿರ ಮಂದಿ ಹಾಗೂ ಇದೀಗ ಸುಮಾರು 7 ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡಿದ್ದಾರೆ.
ಅಂಕಿ-ಅಂಶಗಳನ್ನು ಗಮನಿಸಿದರೆ ಕೋವಿಡ್ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡಿದ್ದು, ಆದಾಯ ಕೂಡ ಸಾಕಷ್ಟು ಬಂದಿದೆ. ಇಷ್ಟಾದರೂ ಕಲಾಕೃತಿಗಳಿಗೆ ಪೇಂಟಿಂಗ್ ಮಾಡದೇ, ಬೆಳೆದಿರುವ ಹುಲ್ಲು ತೆರವುಗೊಳಿಸದೆ ನಿರ್ಲಕ್ಷ್ಯವಹಿಸಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಿದರೆ ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಪ್ರವಾಸಿ ತಾಣಗಳು ಬಂದ್ ಆಗಿವೆ. ಅದರ ಪರಿಣಾಮ ಪ್ರವಾಸಿಗರಿಲ್ಲದೆ ಸಾಕಷ್ಟು ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಉತ್ತರ ಕನ್ನಡದ ಬುಡಕಟ್ಟು ಜನಾಂಗದ ಬದುಕನ್ನು ಕಣ್ಣಿಗೆ ಕಟ್ಟಿಕೊಡುವ ರೀತಿ ಕಲಾವಿದರು ನಿರ್ಮಾಣ ಮಾಡಿದ ಏಕೈಕ ಗಾರ್ಡನ್ ಇದಾಗಿದೆ. ಇದನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣವಾದ ರಾಕ್ ಗಾರ್ಡನ್ ಹಾಳು ಬಿಡುವುದು ಸರಿಯಲ್ಲ. ಮುತುವರ್ಜಿವಹಿಸಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾರವಾರ ನಗರದಲ್ಲಿದೆ ಆಧುನಿಕತೆಯ ಸ್ಪರ್ಶವಿರದ ಅದ್ಭುತ ಗ್ರಾಮ: ಹಳ್ಳಿ ಸೊಗಡು ಪರಿಚಯಿಸುತ್ತಿದೆ ರಾಕ್ ಗಾರ್ಡನ್