ಕಾರವಾರ: ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸುನೀಲ್ ಪವಾರ್ ಎಂಬುವರು ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಶಿರಸಿ ತಾಲೂಕಿನ ಕಲಗಾರ್ ಹಳ್ಳಿಯ ಸುನೀಲ್ ಪವಾರ್ ಕಲಾ ವಿಭಾಗದಲ್ಲಿ ಹಾಗೂ ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಂದು ಸ್ಕೂಟರ್, ಮೂರು ಉಳಿತಾಯ ಖಾತೆ, ಪತ್ನಿಯ 20 ಗ್ರಾಂ ಚಿನ್ನ, ಮಕ್ಕಳ ಹೆಸರಿನಲ್ಲಿ ಎಲ್ಐಸಿ ಪಾಲಿಸಿ, ತಮ್ಮ ಕೈಯಲ್ಲಿ 30 ಸಾವಿರ ರೂ. ನಗದು, ಪತ್ನಿಯ ಕೈಯಲ್ಲಿ 10 ಸಾವಿರ ನಗದು ಇದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮೂರು ಬ್ಯಾಂಕ್ ಗಳಲ್ಲಿ ಒಟ್ಟು 1.39 ಲಕ್ಷ ಸಾಲ ಇರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಇನ್ನು ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಐವರು ಅಭ್ಯರ್ಥಿಗಳು ಏಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಉತ್ತಮ ಪ್ರಜಾಕೀಯ ಪಕ್ಷದಿಂದ ಉಳಿದ ನಾಲ್ವರಾದ ಜೊಯಿಡಾದ ಬಾಲಕೃಷ್ಣ ಅರ್ಜುನ್ ಪಾಟೀಲ್, ಭಟ್ಕಳದ ಮೊಹಮದ್ ಜಬ್ರೂದ್ ಕಾತೀಬ್, ಕಾರವಾರದ ನಾಗರಾಜ ಶಿರಾಲಿ ಹಾಗೂ ಹೊನ್ನಾವರದ ಅನೀತಾ ಅಶೋಕ್ ಶೇಟ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.