ಕಾರವಾರ: ನೋ ಸ್ಕಾಲಪೆಲ್ ವ್ಯಾಸೆಕ್ಟಮಿ ಮೂಲಕ ಪುರಷರು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ನ.28 ರಿಂದ ಡಿ.4 ರವರೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಂತೆ ಪುರುಷರು ನೋ ಸ್ಕಾಲಪೆಲ್ ವ್ಯಾಸೆಕ್ಟಮಿ (ಎನ್ಎಸ್ವಿ) ಮೂಲಕ ಸುಲಭವಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಶಸ್ತ್ರ ಚಿಕಿತ್ಸೆಗೊಳಗಾಗುವ ಪುರುಷರಿಗೆ ಸರ್ಕಾರದಿಂದ 1,500 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಆಸಕ್ತರಿಗೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ನ.28 ಕುಮಟಾ ಮತ್ತು ಹೊನ್ನಾವರ ನ.29, ಶಿರಸಿ ಮತ್ತು ಸಿದ್ದಾಪುರ ನ.30 ಯಲ್ಲಾಪುರ ಮುಂಡಗೋಡ ಡಿ.02 ಹಳಿಯಾಳ ಜೋಯಿಡಾ ಡಿ.03 ಹಾಗೂ ಭಟ್ಕಳ ಡಿ.04 ರಂದು ಆಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.
ಕುಷ್ಠರೋಗ ಹಾಗೂ ಕ್ಷಯರೋಗ ಪತ್ತೆಗೆ ಆಂದೋಲನ:
2019-20ನೇ ಸಾಲಿನಲ್ಲಿ ಕುಷ್ಠರೋಗ ಹಾಗೂ ಕ್ಷಯ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಆಂದೋಲನ ನಡೆಯಲಿದೆ. ಕುಷ್ಠರೋಗಕ್ಕೊಳಗಾದವರ ದೇಹದ ಮೇಲಿನ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ, ಕೈಕಾಲುಗಳ ಮೇಲೆ ಎಣ್ಣೆ ಸವರಿದಂತೆ ಹೊಳಪು ಇತರ ಲಕ್ಷಣಗಳು ಕಂಡುಬರಲಿದ್ದು, ಇಂತವರು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಇನ್ನು ಈ ಸಂಧರ್ಭದಲ್ಲಿ ವೈದ್ಯಾಧಿಕಾರಿಗಳಾದ, ಡಾ.ಶಂಕರ್ ರಾವ್, ಡಾ. ಮಹಾಬಲೇಶ್ವರ ಹೆಗಡೆ ಸೇರಿದಂತೆ ಇತರರು ಇದ್ದರು.