ಕಾರವಾರ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ 14 ದಿನಗಳ ಕಾಲ ಕೊರೊನಾ ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದೇವೆ. ಕೋವಿಡ್ ಸೋಂಕಿತರಿಗೆ ಬೆಡ್, ಆಕ್ಸಿಜನ್ ಮತ್ತು ವ್ಯಾಕ್ಸಿನ್ ಸೇರಿದಂತೆ ಯಾವುದೇ ರೀತಿಯಲ್ಲೂ ವೈದ್ಯಕೀಯ ಸೌಲಭ್ಯಗಳು ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕಾರವಾರದ ಡಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ರೋಗಿಗಳಿಗಾಗಿ ಜಿಲ್ಲೆಯ ಎಲ್ಲ ತಾಲೂಕಿನ ಆಸ್ಪತ್ರೆಗಳು, ಕಿಮ್ಸ್ ಹಾಗೂ ಒಂದು ಸಿಹೆಚ್‍ಸಿಎಲ್ ಸೇರಿದಂತೆ 1830 ಬೆಡ್‍ಗಳನ್ನು ಈಗಾಗಲೇ ಗುರುತಿಸಿ ಕಾಯ್ದಿರಿಸಲಾಗಿದೆ. ಈ ಪೈಕಿ 1085 ಬೆಡ್‍ಗಳು ಸಾಮಾನ್ಯ, 48 ಹೈಪೋ ಆಕ್ಸಿಜನ್ ಬೆಡ್‍ಗಳು, 368 ಸಿಂಪಲ್ ಆಕ್ಸಿಜನ್ ಬೆಡ್‍ಗಳಿವೆ.
562 ಸಾಮಾನ್ಯ ಬೆಡ್‍ಗಳು ಲಭ್ಯವಿದ್ದು, 123 ಬೆಡ್‍ಗಳು ಬಳಕೆಯಾಗುತ್ತಿವೆ. ಹೆಚ್‍ಎಫ್‍ಎನ್‍ಸಿ ಬೆಡ್‍ಗಳಲ್ಲಿ 59 ಲಭ್ಯವಿದ್ದು, 5 ಬೆಡ್‍ಗಳು ಬಳಕೆಯಾಗುತ್ತಿವೆ. 368 ಸಿಂಪಲ್ ಆಕ್ಸಿಜನ್ ಬೆಡ್‍ಗಳಲ್ಲಿ 90 ಮಾತ್ರ ಲಭ್ಯವಿದ್ದು, 76 ಐಸಿಯು ಬೆಡ್‍ಗಳಲ್ಲಿ 71 ಲಭ್ಯವಿವೆ. 65 ಹೆಚ್ಚುವರಿ ಬೆಡ್‍ಗಳನ್ನು ಅಳವಡಿಸುವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಅಗತ್ಯಕ್ಕೆ ಅನುಗುಣವಾಗಿ ಬಳಸಲಾಗುವುದು. ಹೀಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಬೆಡ್‍ಗಳ ಕೊರತೆಯಿಲ್ಲ. ಆದರೂ ಶಿರಸಿ ಮತ್ತು ಕುಮಟಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಿದ್ಧತೆಗಾಗಿ ಹೆಚ್ಚುವರಿಯಾಗಿ ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಕಾರವಾರದಲ್ಲಿರುವ ಬೆಡ್‍ಗಳು ಭರ್ತಿಯಾದ ಸನ್ನಿವೇಶ ಉಂಟಾದರೆ ಈ ಬೆಡ್‍ಗಳ ಬಳಕೆಗೆ ಅನುಮತಿ ನೀಡಲಾಗುವುದು. ಜೊತೆಗೆ ಶಿರಸಿ ಮತ್ತು ಕುಮಟಾದಲ್ಲಿ ಆಕ್ಸಿಜನ್ ಬೆಡ್‍ಗಳಿದ್ದು, ಆರೋಗ್ಯ ಸಿಬ್ಬಂದಿ ಲಭ್ಯವಿದ್ದಾರೆ. ಹೀಗಿದ್ದರೂ ಬೇರೆ ಕಡೆಗಳಿಂದ ಆರೋಗ್ಯ ಸಿಬ್ಬಂದಿ ಕರೆಸಿ ಜನರಿಗೆ ಸೇವೆ ನೀಡಲಾಗುವುದು. ಇದರ ಜೊತೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 367 ಬೆಡ್‍ಗಳ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕಾರವಾರ ವೈದ್ಯಕೀಯ ಮಹಾವಿದ್ಯಾಲಯ ಉತ್ತಮ ಪ್ರಯೋಗಾಲಯ ವ್ಯವಸ್ಥೆ ಹೊಂದಿದ್ದು, ಕೋವಿಡ್ ನಿರ್ವಹಣೆಗೆ ಇದನ್ನೇ ನಂಬಿಕೊಳ್ಳಲಾಗಿದೆ. ಇದರಲ್ಲಿ ಈಗ 70 ಸಾಮಾನ್ಯ ಕೋವಿಡ್ ಬೆಡ್‍ಳಿದ್ದು, 19 ಬೆಡ್‍ಗಳಲ್ಲಿ ಜನರಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ 557 ಜಂಬೋ, 152 ಸ್ಮಾಲ್ ಆಕ್ಸಿಜನ್ ಸಿಲಿಂಡರ್ಗಳಿವೆ. ಇದರ ಜೊತೆಗೆ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಆಕ್ಸಿಜನ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಯಾವುದೇ ವೈದ್ಯರೂ ಸಹ ಗರ್ಭಿಣಿ ಮಹಿಳೆಯರಿಗೆ ಕೋವಿಡ್ ನೆಗಟಿವ್ ರಿಪೋರ್ಟ್ ತರಲು ಸೂಚಿಸಬಾರದು. ಹಾಗೇನಾದರೂ ನೆಗಟಿವ್ ರಿಪೋರ್ಟ್ ಕೇಳಿದ್ದು ಕಂಡು ಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ಬೇರೆ ಪ್ರದೇಶಗಳಿಂದ ಆಗಮಿಸಿದವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‍ಗೆ ಒಳಗಾಗಬೇಕು. ವಿವಿಧ ಕಾಯಿಲೆಗಳಿಗೆ ಒಳಗಾದವರು ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಐಸೋಲೇಶನ್‍ಗೆ ಒಳಗಾಗಬೇಕು. ಕೋವಿಡ್ ಲಕ್ಷಣಗಳು ಕಂಡು ಬಂದವರು ಮಾತ್ರ ಪರೀಕ್ಷೆಗೆ ಒಳಗಾಗಬೇಕು. ಕೋವಿಡ್ ಸಂಬಂಧಿತ ಸಮಸ್ಯೆಗಳೆನಾದರೂ ಇದ್ದರೆ ತಕ್ಷಣ ಜಿಲ್ಲಾಡಳಿತದಿಂದ ಗುರುತಿಸಲಾದ ತಾಲೂಕು ಹಾಗೂ ಸೆಕ್ಟರ್ ಆಫೀಸರ್ ಅಥವಾ ಕೋವಿಡ್ ನೋಂದಣಿ ಕೇಂದ್ರದ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬೇಕು. ಜತೆಗೆ ಸಂಬಂಧಪಟ್ಟ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನ ಸಂಪರ್ಕಿಸಬೇಕು. ಹೊರಗಡೆಯಿಂದ ಬಂದವರನ್ನು ಗುರುತಿಸಿ ಅವರ ಮೇಲೆ ನಿಗಾವಹಿಸಲು ವಿಲೇಜ್ ಟಾಸ್ಕ್ ಪೋರ್ಸ್ ಸಮಿತಿ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಜಿಲ್ಲೆಯ ಜನರು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.