ಕಾರವಾರ: ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದಲ್ಲಿ ತಲೆ ಎತ್ತಿರುವ ಭವ್ಯ ಒಕ್ಕಲಿಗರ ಸಮುದಾಯ ಭವನವನ್ನು ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಒಕ್ಕಲಿಗರ ಸಂಘ, ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಂಡಿರುವ ಭವ್ಯ ಸಮುದಾಯ ಭವನ ಹೊನ್ನಾವರ ಭಾಗದ ಸುತ್ತಮುತ್ತ ಭಾಗದ ಜನರಿಗೆ ಲಭ್ಯವಾಗಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬಡತನದ ನಡುವೆಯೂ ಇಂದು ಒಕ್ಕಲಿಗ ಸಮುದಾಯ ಒಂದಾಗಿದೆ. ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ಕೆ.ಎಚ್.ರಾಮಯ್ಯ ಅವರು ಈ ಹಿಂದೆ ಒಕ್ಕಲಿಗ ಸಂಘವನ್ನು ಒಟ್ಟುಗೂಡಿಸಿದರು. ಒಂದು ಮಠಕ್ಕೆ ಪ್ರೋತ್ಸಾಹ ನೀಡಿದರೆ ಸಮಾಜದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಹೀಗಾದರೇ ಮಾತ್ರ ಸಮಾಜ ಉದ್ದಾರ ಆಗುತ್ತದೆ ಎಂದರು.
ಉಪಮುಖ್ಯಮಂತ್ರಿ ಅಶ್ವತ್ಥ್ನಾರಾಯಣ, ಒಕ್ಕಲಿಗ ಸಮಾಜಕ್ಕೆ ಬೇಕಾದ ಸಹಕಾರವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿದೆ ಎಂದರು.
ಉತ್ತರ ಕನ್ನಡ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಒಂದು ಸಂಘ ಮನಸ್ಸು ಮಾಡಿದರೇ ಏನು ಬೇಕಾದರು ಮಾಡಬಹುದು ಎಂಬುದಕ್ಕೆ ಹೊನ್ನಾವರದಲ್ಲಿ ತಲೆ ಎತ್ತಿರುವ ಸಮುದಾಯ ಭವನ ಸಾಕ್ಷಿಯಾಗಿದೆ ಎಂದರು.
ಸಾಧಕರು ಹಾಗೂ ದಾನಿಗಳಿಗೆ ಸನ್ಮಾನ: ಪದ್ಮಶ್ರೀ ಪುರಷ್ಕಾರಕ್ಕೆ ಆಯ್ಕೆಯಾಗಿರುವ ಅಂಕೋಲಾದ ತುಳಸಿ ಗೌಡ, ಒಕ್ಕಲಿಗ ಸಮುದಾಯಭವನ ನಿರ್ಮಾಣಕ್ಕೆ ಜಾಗ ನೀಡಿದ ಮಾದೇವಿ ಗೌಡ ಹಾಗೂ ಸಮುದಾಯ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಮಂಕಾಳು ವೈದ್ಯ ಅವರನ್ನು ಸನ್ಮಾನಿಸಲಾಯಿತು.