ಭಟ್ಕಳ: ಜ್ವರದಿಂದ ಬಳಲುತ್ತಿದ್ದ ಬಾಲಕಿಯೋರ್ವಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಫಿಟ್ಸ್‌ನಿಂದ ಸಾವನ್ನಪ್ಪಿರುವ ಘಟನೆ ಗುರುವಾರ ತಡರಾತ್ರಿ ವರದಿಯಾಗಿದೆ. ಮೃತಪಟ್ಟ ಬಾಲಕಿಯನ್ನು ಫಾತಿಮಾ ಮುನಾ ಎಂದು ಗುರುತಿಸಲಾಗಿದೆ. ಆನಂದ ಆಶ್ರಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಿದ್ದೀಕ್ ಸ್ಟ್ರೀಟನ ನಿವಾಸಿ ಎಂದು ತಿಳಿದುಬಂದಿದೆ. ಬಾಲಕಿ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಕಳೆದ 2 ದಿನಗಳ ಹಿಂದಷ್ಟೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜ್ವರ ಸಂಬಂಧಿ ಎಲ್ಲಾ ಪರೀಕ್ಷೆಗಳು (ಸಿ.ವಿ.ಸಿ, ಸಿ.ಆರ್.ಪಿ, ಮಲೇರಿಯಾ, ಡೆಂಗ್ಯೂ) ಮಾಡಿದ್ದು ನೆಗೆಟಿವ್ ವರದಿ ಬಂದಿತ್ತು. ಚಿಕಿತ್ಸೆ ಮುಂದುವರೆಸಿದ್ದ ವೈದ್ಯರು ಆಕೆ ಗುಣಮುಖಳಾಗುವ ವಿಶ್ವಾಸದಲ್ಲಿದ್ದರು. ಆದರೆ ಗುರುವಾರ ತಡರಾತ್ರಿ 11 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಫಿಟ್ಸ್ ಉಂಟಾಗಿ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾಳೆ. ಆದರೆ ನಿಫಾ ಎಂಬ ಮಾರಣಾಂತಿಕ ಖಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಎಂದು ವದಂತಿ ಹಬ್ಬಿಸಲಾಗಿದೆ.
ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, "ಬಾಲಕಿಯ ಸಾವಿಗೆ ಫಿಟ್ಸ್ ಕಾರಣ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯಿಂದ ಮಾತ್ರ ನಿಖರ ಕಾರಣ ತಿಳಿಯಬಹುದಿತ್ತು. ಆದರೆ ಕುಟುಂಬಸ್ಥರ ನಿರಾಕರಣೆಯಿಂದ ಶವ ಹಸ್ತಾಂತರಿಸಲಾಗಿದೆ. ಬೇರೆ ಯಾವುದೇ ಮಾರಣಾಂತಿಕ ಕಾಯಿಲೆಯಿಂದ ಸಾವು ಸಂಭವಿಸಿದೆ ಎನ್ನುವುದು ಸುಳ್ಳು. ಘಟನೆಯ ಬಳಿಕ ಇಂದು ಬೆಳಗ್ಗೆ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ. ನಿಫಾ ಕಾಯಿಲೆಯಿಂದ ಮೃತಪಟ್ಟಿದ್ದಾಳೆಂದು ತಿಳಿಯಲು ಅವರು ಕರೆ ಮಾಡಿದ್ದಾರೆ. ಆದರೆ ಆಕೆ ನಿಫಾದಿಂದ ಸಾವನ್ನಪ್ಪಿಲ್ಲ. ಜನರು ಇಲ್ಲಸಲ್ಲದ ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವುದನ್ನು ನಿಲ್ಲಿಸಬೇಕು. ನಿಫಾ, ಡೆಂಗ್ಯೂ ಸೇರಿದಂತೆ ಯಾವುದೇ ಮಾರಣಾಂತಿಕ ರೋಗದ ಲಕ್ಷಣಗಳು ಬಾಲಕಿಯಲ್ಲಿ ಕಂಡು ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಮಾತನಾಡಿದ ಮಕ್ಕಳ ತಜ್ಞ ಡಾ.ಸುರಕ್ಷಿತ್ ಶೆಟ್ಟಿ, "ಬಾಲಕಿಯು ಜ್ವರದಿಂದ ಬಳಲುತ್ತಿದ್ದು ಗುರುವಾರದಂದು ಫಿಟ್ಸ್ ಉಂಟಾಗಿ, ವಾಂತಿಯ ವೇಳೆ ಉಸಿರಾಟಕ್ಕೆ ಸಮಸ್ಯೆಯಾಗಿ ಮೃತಪಟ್ಟಿದ್ದಾಳೆ. ಪ್ರಾಥಮಿಕವಾಗಿ ಫಿಟ್ಸ್ ಇರುವುದಾಗಿ ಕಂಡು ಬಂದಿದೆ" ಎಂದು ಹೇಳಿದರು.
ಶಾಲೆಗೆ ರಜೆ: ಬಾಲಕಿಯ ಮರಣದ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗ ಶಾಲೆಗೆ ರಜೆ ಘೋಷಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿಫಾದಿಂದ ಬಾಲಕಿ ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ರಜೆ ನೀಡಿರುವುದಾಗಿ ಸುಳ್ಳು ವದಂತಿ ಹಬ್ಬಿಸಿದ್ದಾರೆ ಎಂದು ಆನಂದ ಆಶ್ರಮ ಪ್ರಾಥಮಿಕ ಶಾಲೆಯ ಮುಖ್ಯಪ್ರಾಧ್ಯಾಪಕಿ ಲವೀನಾ ಜ್ಯೋತಿ ತಿಳಿಸಿದರು.
ಇದನ್ನೂ ಓದಿ: ನಿಫಾ ವೈರಸ್: ಕೇರಳದಿಂದ ಕರ್ನಾಟಕಕ್ಕೆ ಬರುವ ಜನರ ತಪಾಸಣೆ