ಕಾರವಾರ: ಅವಘಡ ಇಲ್ಲವೇ ಆಕಸ್ಮಿಕವಾಗಿ ಹಡಗುಗಳಿಂದ ಸೋರಿಕೆಯಾಗುವ ತೈಲದಿಂದ ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ಹೊಸ ಯಂತ್ರವೊಂದು ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿದ್ದು, ಇಂದು ಇದರ ಪ್ರಯೋಗ ನಡೆಸಲಾಗಿದೆ.
ತೈಲ ಮಾಲಿನ್ಯ ನಿಯಂತ್ರಣ ಉಪಕರಣ (ಆಯಿಲ್ ಸ್ಟೀಲ್ ರಿಸ್ಪೋನ್ಸ್ ಇಕ್ಯೂಪ್ ಮೆಂಟ್) ಎಂದು ಕರೆಯುವ ಈ ಯಂತ್ರವನ್ನು ಟಗ್ ಒಂದರ ಮೇಲೆ ಅಳವಡಿಸಲಾಗಿದೆ. ಬಂದರಿಗೆ ಬರುವ ಹಡಗುಗಳಿಂದ ಇಂಧನ ಸೋರಿಕೆಯಾಗಿ ಇಲ್ಲವೇ ಇತರೆ ಯಾವುದೇ ಅವಘಡಗಳಲ್ಲಿ ಹಡಗುಗಳಲ್ಲಿದ್ದ ತೈಲ ಸೋರಿಕೆಯಾಗಿದ್ದರೆ ನೀರಿನಿಂದ ಇದನ್ನು ಬೇರ್ಪಡಿಸಲು ಸಾಧ್ಯವಿದೆ. ಇಂಧನ ಅಥವಾ ತೈಲ ಸೋರಿಕೆಯಾದ ತಕ್ಷಣ ಆ ಪ್ರದೇಶದ 400 ಮೀಟರ್ ಸುತ್ತಲೂ ಇನ್ ಪ್ಲೆಟಿಬಲ್ ಬೂಮ್ ಅಳವಡಿಸಲಾಗುತ್ತದೆ. ಇದು ಸೋರಿಕೆಯಾದ ತೈಲ ಸಮುದ್ರಕ್ಕೆ ಹರಡದಂತೆ ತಡೆಯಲಿದ್ದು, ಬಳಿಕ ತೈಲ ಮಾತ್ರ ಹೀರಿಕೊಳ್ಳುವ ಎರಡು ಆಯಿಲ್ ಸ್ಕೀಮರ್ಗಳ ಮೂಲಕ ಟಗ್ನಲ್ಲಿರುವ ಟ್ಯಾಂಕ್ನಲ್ಲಿ ಶೇಖರಿಸಲಾಗುತ್ತದೆ.
ಇದರಿಂದಾಗಿ ಇಂಧನವನ್ನು ಪುನಃ ಪಡೆಯುವುದರ ಜೊತೆಗೆ ನೀರಿನೊಂದಿಗೆ ತೈಲ ಬೆರೆಯದೇ ಸಮುದ್ರ ಮಾಲಿನ್ಯವಾಗುವುದನ್ನು ತಪ್ಪಿಸಲು ಯಂತ್ರ ಸಹಕಾರಿಯಾಗಿದೆ. ಮಹಾರಾಷ್ಟ್ರದ ವಿರಾಜ್ ಕ್ಲೀನ್ಸಿ ಎಂಟರ್‌ಪ್ರೈಸಸ್ ಕಂಪನಿ ಈ ಯಂತ್ರವನ್ನು ಕಾರವಾರ ಬಂದರಿಗೆ ತಂದಿದ್ದು, ಬಂದರಿನ ಅಧಿಕಾರಿಗಳು ಸಿಬ್ಬಂದಿ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಯೋಗ ನಡೆಸಲಾಗಿದೆ ಎಂದು ಬಂದರು ಆಡಳಿತ ವಿಭಾಗದ ಅಧಿಕಾರಿ ಸುರೇಶ ಶೆಟ್ಟಿ ತಿಳಿಸಿದ್ರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 1.25ರೂ. ಕೋಟಿಯಂತೆ ಒಟ್ಟು 2.50ರೂ. ಕೋಟಿ ವೆಚ್ಚದಲ್ಲಿ ಈ ಯಂತ್ರವನ್ನು ತರಿಸಲಾಗಿದೆ. ಇದು ಗೋವಾ, ಮಂಗಳೂರು ಹೊರತು ಪಡೆಸಿದರೇ ಕಾರವಾರದಲ್ಲಿ ಇದೇ ಮೊದಲ ಬಾರಿಗೆ ತರಿಸಲಾಗಿದೆ. ಎಲ್ಲೇ ಅವಘಡಗಳು ಸಂಭವಿಸಿದರು ಇದರ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.