ಕಾರವಾರ: ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ ಗ್ರಾಮವು ಹಲವು ದಶಕಗಳಿಂದ ಸುಧಾರಣೆ ಕಂಡಿಲ್ಲ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರು ತೀವ್ರ ಸಂಕಷ್ಟ ಎದುರಿಸುತ್ತಾರೆ.
ಇಲ್ಲಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಕೆಸರುಮಯ ರಸ್ತೆಯಲ್ಲೇ ಭತ್ತದ ಸಸಿ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.
ಮಿರ್ಜಾನ್ ಕೋಟೆ ಮಾರ್ಗದಿಂದ 3 ಕಿ.ಮೀ. ಇರುವ ರಸ್ತೆ ಹಲವು ವರ್ಷಗಳಿಂದ ಡಾಂಬರೀಕರಣ ಕಾಣದೇ ಹೊಂಡಂತಾಗಿದೆ. ಇಂತಹ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು, ಪಾದಚಾರಿಗಳು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದ ಬೇಸತ್ತ ಜನ ಇಂದು ಸಸಿ ನೆಡುವ ಮೂಲಕ ಇನ್ನಾದರೂ ರಸ್ತೆ ಅಭಿವೃದ್ಧಿಗೆ ಮುಂದಾಗಿ ಎಂದು ಒತ್ತಾಯಿಸಿದರು.
ಇನ್ನು ಚತ್ರಕೂರ್ವೆ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮನೆಗಳಿದ್ದು, 200 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಇವರಿಗೆ ಯಾವ ಅನುದಾನವೂ ಬರುತ್ತಿಲ್ಲವಂತೆ. ಜನ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದ್ದು, ಈ ರಸ್ತೆಯಲ್ಲಿ ಪುರಾತನ ಇಲಾಖೆಗೆ ಒಳಪಟ್ಟ ಪ್ರಸಿದ್ಧ ಪ್ರವಾಸಿ ಸ್ಥಳವಾದ ಮಿರ್ಜಾನ್ ಕೋಟೆ ಇದೆ. ಪ್ರವಾಸೋದ್ಯಮ ಇಲಾಖೆ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಗ್ರಾಮಕ್ಕೆ ಭೇಟಿ ನೀಡಿ ಡಾಂಬರು ರಸ್ತೆ ನಿರ್ಮಾಣದ ಕುರಿತು ಕ್ರಮ ಕೈಗೊಳ್ಳಬೇಕೆಂಬುದು ಈ ಭಾಗದ ಜನರ ಒತ್ತಾಯವಾಗಿದೆ.