ಕಾರವಾರ (ಉ.ಕ.): ಹೊಂ ಕ್ವಾರಂಟೈನ್ ಸೀಲ್ ಹೊಂದಿದ್ದ ದಂಪತಿ ವಠಾರ ಪ್ರವೇಶಿಸುವುದಕ್ಕೆ ಸುತ್ತಮುತ್ತಲಿನ ಮನೆಯವರು ವಿರೋಧ ವ್ಯಕ್ತಪಡಿಸಿರುವ ಘಟನೆ ನಗರದ ಆಶ್ರಮ ರಸ್ತೆಯಲ್ಲಿ ನಡೆದಿದೆ.
ನಗರದಲ್ಲಿ ಆಶ್ರಮ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿದ್ದ ಕಿಶೋರ್ ಗೆಲ್ಲೋಟ್ ಮತ್ತು ಆತನ ಪತ್ನಿ ಕಳೆದ ಒಂದೂವರೆ ತಿಂಗಳ ಹಿಂದೆ ಮುಂಬೈನ ರಾಯಗಢಕ್ಕೆ ತೆರಳಿದಾಗ ಲಾಕ್ ಡೌನ್ನಿಂದಾಗಿ ಸಿಕ್ಕಿ ಬಿದ್ದಿದ್ದರು. ಆದರೆ ಪಾಸ್ ಪಡೆದು ವಾಹನವೊಂದರಲ್ಲಿ ಆಗಮಿಸಿದ್ದು, ಕಾರವಾರದ ಚೆಕ್ ಪೋಸ್ಟ್ ಬಳಿ ತಡೆದು ಹೊಂ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿದೆ.
ಆದರೆ ಮನೆಗೆ ಬಂದಾಗ ಸುತ್ತಮುತ್ತಲು ಬಾಡಿಗೆ ಮನೆಯಲ್ಲಿ ಇದ್ದವರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರ ಠಾಣೆ ಪಿಎಸ್ಐ ಸಂತೋಷಕುಮಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಿಚಾರಿಸಿದಾಗ ಚೆಕ್ ಪೋಸ್ಟ್ನಲ್ಲಿ ನೇರವಾಗಿ ಮನೆಗೆ ತೆರಳುವಂತೆ ಸೂಚಿಸಿದ ಕಾರಣ ಮನೆಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಬಳಿಕ ಇಬ್ಬರು ದಂಪತಿ ಹಾಗೂ ಮನೆಯಲ್ಲಿದ್ದು ಸಂಪರ್ಕಕ್ಕೆ ಬಂದ ಮಗಳನ್ನು ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯಲಾಗಿದೆ. ಎಲ್ಲರನ್ನು ಸದ್ಯ ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.