ಶಿರಸಿ: ಕಲೆ,ಸಾಹಿತ್ಯ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ 'ನಮ್ಮನೆ ಹಬ್ಬ' ಸಂಭ್ರಮ ಶಿರಸಿಯಲ್ಲಿ ನಡೆಯಿತು. ಚಿತ್ರನಟಿ ತಾರಾ ಅನುರಾಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ನೀಡಿದರು.
ಶಿರಸಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕ ಅಡಿಯಲ್ಲಿ ನಡೆದ ನಮ್ಮನೆ ಹಬ್ಬದಲ್ಲಿ ನಟಿ ತಾರಾ ಭಾಗವಹಿಸಿ, ದಶಮಾನೋತ್ಸವ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ನಾವು ಎಲ್ಲೋ ಹೋದರೂ ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಸಿಗುವ ಸಂತಸ ಬೆರೆಲ್ಲೂ ಸಿಗಲು ಸಾಧ್ಯವಿಲ್ಲ. ಶಿರಸಿಯ ನೆಲ ಜಲ ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳ ತವರೂರು. ಕರುನಾಡಿಗೆ ಕಲಾವಿದರನ್ನುನೀಡಿದ ಶ್ರೇಷ್ಠ ಭೂಮಿ ಶಿರಸಿ. ತೆರೆಮರೆ ಕಾಯಂತೆ ಇರುವ ಕಲಾವಿದರನ್ನು, ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತೀರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮನೆ ಹಬ್ಬ ಇನ್ನಷ್ಟು ಜನಪ್ರಿಯತೆ ಪಡೆಯಲಿ ಎಂದರು.
ಇದಕ್ಕೂ ಮುನ್ನ ನಮ್ಮನೆ ಪ್ರಶಸ್ತಿಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸೆಲ್ಕೋ ಇಂಡಿಯಾ ಬೆಂಗಳೂರು ಸಿಇಓ ಮೋಹನ್ ಹೆಗಡೆ ಅವರಿಗೆ ಹಾಗೂ ನಮ್ಮನೆ ಯುವ ಪುರಸ್ಕಾರವನ್ನು ಕಲಾವಿದ ವಿಭವ ಮಂಗಳೂರು ಅವರಿಗೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿ.ಉಮಾಕಾಂತ ಭಟ್, ಚಲನಚಿತ್ರ ನಟ ರಾಮಕೃಷ್ಣ ಹೆಗಡೆ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಅಶೀಸರ, ಹಿರಿಯ ಪತ್ರಕರ್ತ ರವೀಂದ್ರ ಭಟ್, ಟ್ರಸ್ಟ್ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಉಪಸ್ಥಿತರಿದ್ದರು.
ಏಳನೇ ರೂಪಕ: ಸಭಾ ಕಾರ್ಯಕ್ರಮದ ನಂತರ ಅಪರೂಪದ ಪದ್ಯಗಳ ಮೂಲಕ ಶ್ರೀಕೃಷ್ಣನ ಪ್ರೇಮದ ಅಮೃತವನ್ನೇ ಹರಿಸುವ ವಿಶ್ವ ಶಾಂತಿ ಸರಣಿಗೆ ಏಳನೇ ಯಕ್ಷರೂಪಕವಾಗಿ ವಂಶೀ ವಿಲಾಸ ಸೇರ್ಪಡೆಗೊಂಡಿತು.ಪ್ರಸಿದ್ದ ಚಲನಚಿತ್ರತಾರೆ ತಾರಾ ಲೋಕಾರ್ಪಣೆಗೊಳಿಸಿದ ಈ ರೂಪಕ ಒಂದುವರೆ ಗಂಟೆಗಳ ಕಾಲ ತುಳಸಿ ಹೆಗಡೆ ಅವಳ ಮೂಲಕ ಅನಾವರಣಗೊಂಡಿತು. ನಾಡಿನ ಹಲವಡೆಯಿಂದ ಐನೂರಕ್ಕೂ ಅಧಿಕ ಕಲಾ ಆಸಕ್ತರು ಪಾಲ್ಗೊಂಡಿದ್ದರು.