ಕಾರವಾರ: ವಿಜಯ ದಶಮಿ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ಕದಂಬರು ಆಳಿದ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವಾಲಯ ಹಾಗೂ ಕಡಲತಡಿಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿರುವ ಮುರುಡೇಶ್ವರದ ಅತ್ಯಂತ ಎತ್ತರದ ಈಶ್ವರ ಮೂರ್ತಿ ಹಾಗೂ ರಾಜಗೋಪುರವನ್ನೊಳಗೊಂಡ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ವತಿಯಿಂದ ಸಿದ್ಧಪಡಿಸಿದ್ದ ಸ್ತಬ್ಧಚಿತ್ರ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ಕಂಡುಬಂದಿತ್ತು. ಇದೀಗ ಈ ಸ್ತಬ್ಧಚಿತ್ರಕ್ಕೆ ದ್ವೀತಿಯ ಬಹುಮಾನ ಸಿಕ್ಕಿದೆ. ಮೊದಲ ಸ್ಥಾನ ಚಾಮರಾಜನಗರದ ಸಮೃದ್ಧ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣದ ಸ್ತಬ್ಧಚಿತ್ರಕ್ಕೆ ಲಭಿಸಿದೆ.