ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬೀಟ್ ವ್ಯವಸ್ಥೆಯನ್ನು ಸದೃಢಗೊಳಿಸಲು 'ಮೈ ಬೀಟ್ ಮೈ ಪ್ರೈಡ್' ಎಂಬ ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, ಇದು ಜನರಿಂದ ಜನರಿಗಾಗಿಯೇ ಇರುವ ಕಾರ್ಯಕ್ರಮ. ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಂತ ತಳಹದಿಯಲ್ಲಿರುವ ವ್ಯವಸ್ಥೆ ಪೊಲೀಸ್ ಬೀಟ್ ವ್ಯವಸ್ಥೆ. ಹಾಗಾಗಿ ತಳಹದಿಯನ್ನು ಭದ್ರಪಡಿಸಲು ಈ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮಂಗಳೂರು ನಗರದ 800 ಬೀಟ್ಗಳಲ್ಲಿ 756 ಬೀಟ್ಗಳನ್ನು ವಿಂಗಡಿಸಲಾಗಿದೆ. ಪ್ರತೀ ಬೀಟ್ಗೆ ಓರ್ವ ಕಾನ್ಸ್ಟೇಬಲ್ ಹಾಗೂ ಓರ್ವ ಹೆಡ್ ಕಾನ್ಸ್ಟೇಬಲ್ಗಳನ್ನು ನೇಮಿಸಲಾಗಿದೆ. ಅಲ್ಲದೆ ಪ್ರತೀ ಬೀಟ್ಗೆ ವ್ಯಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ. ಇದರಲ್ಲಿ ಸಾರ್ವಜನಿಕರನ್ನು ಗ್ರೂಪ್ ಸದಸ್ಯರನ್ನಾಗಿ ಆ್ಯಡ್ ಮಾಡಲಾಗುತ್ತದೆ. ಇದರಿಂದ ಪ್ರತೀ ದಿನ ಅವರ ದೂರು, ಸಲಹೆಗಳನ್ನು ಅದರಲ್ಲಿ ವಿನಿಮಯ ಮಾಡಬಹುದು ಎಂದು ಹೇಳಿದರು.
ಈ ಯೋಜನೆಯ ಮತ್ತೊಂದು ವೈಶಿಷ್ಟ್ಯ, ಸಂಬಂಧಪಟ್ಟ ಬೀಟ್ ಕಾನ್ಸ್ಟೇಬಲ್ ಜೊತೆಗೂಡಿ ಮಂಗಳೂರು ನಗರ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಕಮಿಷನರ್ ಒಳಗೊಂಡಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಂಗಳಿಗೊಂದು ದಿನ ಒಂದು ದಿನದ ಬೀಟ್ ಕರ್ತವ್ಯ ನಿರ್ವಹಿಸುತ್ತಾರೆ. ಪರಿಣಾಮ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳ ಅರಿವು ಮೂಡುತ್ತದೆ. ಅಲ್ಲದೆ ಜನರ ಸಮಸ್ಯೆಗಳನ್ನು ಅರಿತು ಸಮಂಜಸ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಅಲ್ಲದೆ ಈ ಹೊಸ ವ್ಯವಸ್ಥೆಯಿಂದ ಜನರು ಮತ್ತು ಪೊಲೀಸರ ನಡುವಿನ ಅಂತರ ಕಡಿಮೆಯಾಗುವುದಲ್ಲದೆ ಜನರಿಗೆ ಪಾಸ್ ಪೋರ್ಟ್ ವೆರಿಫಿಕೇಶನ್, ಇತರ ದೂರಗಳ ಬಗೆಗೆ ಪೊಲೀಸ್ ಸ್ಟೇಷನ್ಗೆ ಅಲೆದಾಡುವ ಸಮಸ್ಯೆಗಳೂ ಪರಿಹಾರವಾಗುತ್ತದೆ.
ಇದೊಂದು ನಿರಂತರವಾದ ಪ್ರಕ್ರಿಯೆಯಾಗಿದ್ದು, ಯಾವ ಅಧಿಕಾರಿ ಯಾವ ದಿನಗಳಲ್ಲಿ ಬೀಟ್ ನಲ್ಲಿ ಕರ್ತವ್ಯನಿರತರಾಗುತ್ತಾರೆ ಎಂಬುದನ್ನು ಮುಂಚಿತವಾಗಿಯೇ ವ್ಯಾಟ್ಸ್ ಆ್ಯಪ್ನಲ್ಲಿ ಸಂದೇಶ ಕಳುಹಿಸಲಾಗುವುದು. ಅಲ್ಲದೆ ಅನೇಕ ಬಾರಿ ವದಂತಿಗಳಿಂದಲೇ ಹಲವಾರು ಸಮಸ್ಯೆಗಳು ಉದ್ಭವಿಸಿದ್ದಿದೆ. ಆದ್ದರಿಂದ ಅಧಿಕೃತವಾದ ಮಾಹಿತಿ ಏನಿದೆ ಅದನ್ನು ಈ ಪೊಲೀಸ್ ಬೀಟ್ ಗ್ರೂಪ್ಗಳಲ್ಲಿ ಸಂದೇಶ ರವಾನಿಸಲಾಗುವುದು. ಒಂದು ಗ್ರೂಪ್ನಲ್ಲಿ 256 ಮಂದಿ ಸದಸ್ಯರಂತೆ, ಸಾರ್ವಜನಿಕರು ಸುಮಾರು ಎರಡು ಲಕ್ಷವರೆಗೆ ಈ ಬೀಟ್ ಗ್ರೂಪ್ನ ಸದಸ್ಯರಾಗುತ್ತಾರೆ. ಹಾಗೆಯೇ ಬೀಟ್ ಆ್ಯಪೊಂದನ್ನು 3-4 ವಾರದೊಳಗೆ ಅಭಿವೃದ್ಧಿ ಮಾಡಲಾಗುತ್ತದೆ. ಅದರಲ್ಲಿ ಆಸಕ್ತ ನಾಗರಿಕರು ಲಾಗ್ ಇನ್ ಆಗಿ ಯಾರು ಯಾವಾಗ ಬೀಟ್ ವ್ಯವಸ್ಥೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರಾದ ಅರುಣಾಂಶ ಗಿರಿ, ಲಕ್ಷ್ಮಿಗಣೇಶ್, ಪೊಲೀಸ್ ವರುಷ್ಠಾಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.