ಭಟ್ಕಳ: ಸರ್ಕಾರದ ಕೋವಿಡ್ ನಿಯಮದಂತೆ ಮುರುಡೇಶ್ವರ ಜಾತ್ರಾ ಮಹೋತ್ಸವ ಸರಳವಾಗಿ ಧಾರ್ಮಿಕ ವಿಧಿ-ವಿಧಾನಗಳ ಪಾಲನೆ ಮಾಡಿ ಆಚರಿಸಲಾಯಿತು.
ಮುಂಜಾನೆಯಿಂದಲೇ ಜಾತ್ರಾ ಮಹೋತ್ಸವದ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬಳಿಕ ಮುರುಡೇಶ್ವರ ದೇವರ ಮಹಾರಥೋತ್ಸವನ್ನು ನೂರಾರು ಭಕ್ತರು ಜಯಘೋಷದೊಂದಿಗೆ ಎಳೆದರು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಜನರಿಗೆ ಮಾತ್ರ ಪಾಸ್ ವಿತರಿಸಲಾಗಿತ್ತು. ಪೊಲೀಸ್ ಬಿಗಿ ಭದ್ರತೆಯಲ್ಲಿ ರಥೋತ್ಸವ ಜರುಗಿತು.
ಇದೇ ವೇಳೆ ಓಲಗ ಮಂಟಪ ಹಾಗೂ ಪುಷ್ಕರಣಿಗೆ ಸಂಪರ್ಕಿಸುವ ನಾಲ್ಕು ರಸ್ತೆಯಲ್ಲಿ ಬ್ಯಾರಿಗೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೂ ಸಹ ಬ್ಯಾರಿಗೇಡ್ ಹೊರಗೆ ನೂರಾರು ಮಂದಿನಿಂತು ರಥೋತ್ಸವವನ್ನು ವೀಕ್ಷಿಸಿದರು. ಜಾತ್ರಾ ಮಹೋತ್ಸವದ ನಂತರ ಕೆಲಕಾಲ ಸಾರ್ವಜನಿಕರಿಗೆ ಪ್ರವೇಶಮುಕ್ತ ಮಾಡಲಾಗಿತ್ತು. ಆಗ ನೂರಾರು ಭಕ್ತರು ರಥಬೀದಿಯಲ್ಲಿ ಸುತ್ತಾಡಿ ರಾತ್ರಿ ವೇಳೆ ಮನೆ ಕಡೆ ತೆರಳಿದರು.
ಮನೆಯಲ್ಲಿಯೇ ಕುಳಿತು ಜನರು ಜಾತ್ರಾ ಮಹೋತ್ಸವವನ್ನು ವೀಕ್ಷಿಸುವಂತೆ ತಾಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಅದಕ್ಕಾಗಿ ಖಾಸಗಿ ಸ್ಥಳೀಯ ಸುದ್ದಿ ವಾಹಿನಿ ಹಾಗೂ ಯೂಟ್ಯೂಬ್ ಚಾನೆಲ್ಗಳಲ್ಲಿ ನೇರ ಪ್ರಸಾರಕ್ಕೆ ಅನುವು ಮಾಡಿ ಕೊಡಲಾಗಿತ್ತು.
ಈ ವೇಳೆ ಆರ್. ಎನ್. ಶೆಟ್ಟಿ ಪುತ್ರ ಸುನೀಲ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು, ಶಾಸಕ ಸುನೀಲ್ ನಾಯ್ಕ, ವಕೀಲ ಆರ್. ಆರ್. ಶ್ರೇಷ್ಟಿ, ಮಾವಳ್ಳಿ ಅಧ್ಯಕ್ಷ, ಸದಸ್ಯರು, ಗ್ರಾಪಂ ಸದಸ್ಯ ಕೃಷ್ಣಾ ನಾಯ್ಕ್, ಈಶ್ವರ ದೊಡ್ಮನೆ, ಶ್ರೀರಾಮ ಸೇನೆಯ ಜಯಂತ ನಾಯ್ಕ್, ಗುತ್ತಿಗೆದಾರ ಈಶ್ವರ ಎನ್. ನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ