ಹಳಿಯಾಳ (ಉತ್ತರ ಕನ್ನಡ): ಪತ್ನಿಯನ್ನು ಕೊಲೆಗೈದು ನೀರಿನ ಖಾಲಿ ಬ್ಯಾರೆಲ್ನಲ್ಲಿ ಶವ ಬಚ್ಚಿಟ್ಟಿದ್ದ ಪತ್ನಿಯನ್ನು ಹಳಿಯಾಳ ಹಾಗೂ ರಾಮನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ ಬಂಧಿತ ಆರೋಪಿ.
ತುಕಾರಾಮ ತೆರಗಾಂವ ಗ್ರಾಮದಲ್ಲಿ ಪತ್ನಿ ಶಾಂತಕುಮಾರಿ (38) ಜತೆ ವಾಸವಾಗಿದ್ದ. ಪರಸ್ತ್ರೀಯರೊಂದಿಗಿನ ಸಲುಗೆಯ ವಿಷಯಕ್ಕೆ ಫೆ.22 ರಂದು ಶಾಂತಕುಮಾರಿ ಮತ್ತು ತುಕಾರಾಮ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಬಳಿಕ ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಮೃತದೇಹವನ್ನು ತುಕಾರಾಮ ನೀರು ತುಂಬುವ ಬ್ಯಾರೆಲ್ನಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬಳಿಕ ಖಾನಾಪುರ ಮೂಲದ ರಿಜ್ವಾನ್ ಕುಂಬಾರಿ ಎಂಬುವವರ ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದು ಚಾಲಕ ರಿಜ್ವಾನ್ ಮತ್ತು ಅಳ್ನಾವರ ಮೂಲದ ಸಮೀರ್ ಪಂತೋಜಿ ಹಾಗೂ ತುಕಾರಾಮ ಸೇರಿ ರಾಮನಗರದ ಕಾಡಿನಲ್ಲಿ ಮೃತದೇಹವನ್ನು ಎಸೆಯಲು ಮುಂದಾಗಿದ್ದರು. ಹಳಿಯಾಳ ಮತ್ತು ರಾಮನಗರದ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇತ್ತೀಚೆಗೆ ಭೀಕರ ಕೊಲೆ ಪ್ರಕರಣ ನಡೆದಿತ್ತು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕುಟುಂಬದ ನಾಲ್ವರ ಹತ್ಯೆ: ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ಶುಕ್ರವಾರ (ಫೆ 24) ನಡೆದಿತ್ತು. ಅದೃಷ್ಟವಶಾತ್ ಮನೆಯೊಳಗೆ ಮಲಗಿದ್ದ ಮಗು ಹಾಗೂ ಪಕ್ಕದ ಮನೆಯಲ್ಲಿದ್ದ ಇನ್ನೊಂದು ಮಗು ಕೊಲೆಗಡುಕರಿಂದ ಪಾರಾಗಿವೆ. ಶಂಭು ಹೆಗಡೆ (65), ಅವರ ಪತ್ನಿ ಮಾದೇವಿ ಹೆಗಡೆ (45), ಅವರ ಮಗ ರಾಜೀವ್ ಹೆಗಡೆ (34) ಹಾಗೂ ಸೊಸೆ ಕುಸುಮಾ ಭಟ್(30) ಕೊಲೆಯಾದವರು.
ಕುಟುಂಬದ ಸಂಬಂಧಿ ವಿನಯ ಶ್ರೀಧರ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಸಾವಿನ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು. ಮಾತುಕತೆ ನಂತರ ಶಂಭು ಭಟ್ಟರು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಆದರೆ ಇದೇ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾ ಸಹೋದರ ಹಲ್ಯಾಣಿ ನಿವಾಸಿ ವಿನಯ ಶ್ರೀಧರ ಭಟ್ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕೊಲೆ ಸಂಬಂಧ ವಿದ್ಯಾ ಭಟ್ ಹಾಗೂ ಅವರ ತಂದೆ ಶ್ರೀಧರ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿಯಾಗಿರುವ ವಿದ್ಯಾಳ ಸಹೋದರ ವಿನಯ ಭಟ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ವಶಪಡಿಸಿಕೊಂಡ ಆರೋಪಿಗಳನ್ನು ಶ್ರೀಧರ್ ಭಟ್ ಹಾಗೂ ವಿದ್ಯಾ ಭಟ್ ಎಂದು ತಿಳಿದು ಬಂದಿದೆ. ಆರೋಪಿ ವಿನಯ ಭಟ್ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಭಟ್ಕಳ ನಾಲ್ವರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ, ಮತ್ತೋರ್ವ ಪರಾರಿ