ಶಿರಸಿ : ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳವಳಿಗಾರರನ್ನು ದೇಶದ್ರೋಹದ ಆರೋಪದ ಅಡಿ ಶಿಕ್ಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‌ಕುಮಾರ್ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖಲೀಸ್ಥಾನ ಚಳವಳಿಯ ಹೋರಾಟಗಾರ ಗುರುಪಥವಂತ ಸಿಂಗ್ ಪನೂನ ಆರೋಪಿತನಾಗಿದ್ದಾನೆ. ಈ ಹಿಂದೆ ಸಂಸದ ಹೆಗಡೆ ಖಲೀಸ್ಥಾನದ ಕುರಿತು ಟ್ವೀಟರ್ ಮೂಲದ ಖಲೀಸ್ಥಾನ ಚಳವಳಿಗಾರರ ವಿರುದ್ಧ ಜಾಹೀರಾತನ್ನು ಪ್ರಕಟಿಸಿದ್ದರು. ಈ ಕಾರಣಕ್ಕೆ ಚಳವಳಿಗಾರರು ದೂರವಾಣಿ ಮೂಲಕ ಕೆಲ ದಿನಗಳ ಹಿಂದೆ ಅದನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಹೆಗಡೆ ಪ್ರತಿಕ್ರಿಯಿಸಿರಲಿಲ್ಲ.
ಸಂಸದ ಹೆಗಡೆ ದೂರವಾಣಿಗೆ ಉತ್ತರ ನೀಡದ ಕಾರಣ ಜುಲೈ19ರಂದು ಅವರ ದೂರವಾಣಿಗೆ +32460207270 ಸಂಖ್ಯೆಯಿಂದ 'ದೆಹಲಿ ಬನೇಗಾ ಖಲೀಸ್ತಾನ' ಎಂಬ ಸಂದೇಶ ಕಳಿಸಿ, ಅದೇ ದಿನ ವಿವಿಧ ದೂರವಾಣಿಯ ಮುಖಾಂತರ ಕರೆ ಮಾಡಿ ಪಂಜಾಬಿ ಭಾಷೆಯ ಧ್ವನಿ ಮುದ್ರಣವನ್ನು ಕಳಿಸಿದ್ದರು. ಅದರಲ್ಲಿ ತಾವೂ ಪ್ರತ್ಯೇಕ ಖಲೀಸ್ಥಾನಕ್ಕಾಗಿ ಚಟುವಟಿಕೆಗಳನ್ನು ಬಹಿರಂಗವಾಗಿ ಮಾಡುತ್ತಿದ್ದೇವೆ. ನೀವು ಏನೂ ಬೇಕಾದರೂ ಮಾಡಿಕೊಳ್ಳಿ. ದೇಶದ್ರೋಹಿ ಕೃತ್ಯದಿಂದಲೇ ಭಾರತ ಸರ್ಕಾರವನ್ನು ಉರುಳಿಸುತ್ತೇವೆ ಎಂಬ ಅರ್ಥದಲ್ಲಿ ಸವಾಲು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಕುರಿತು ಸಂಸದ ಹೆಗಡೆ ಜುಲೈ 22ರಂದು ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.