ಕಾರವಾರ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಬಿಜೆಪಿ ನಾಯಕರಿಗೆ ಸಿಹಿ ನೀಡಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಹಿನ್ನಡೆಯಾಗಿದೆ.
ಕಾರವಾರ- ಅಂಕೋಲಾದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದ್ದು ಹಲವು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಇನ್ನೂ ಕೆಲವೆಡೆ ಎರಡೂ ಪಕ್ಷದಿಂದ ದೂರ ಉಳಿದ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.
ಬಿಜೆಪಿ ಭದ್ರಕೋಟೆಯಾಗಿದ್ದ ಕುಮಟಾ- ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರೇ ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಸಹ ಕೆಲವೆಡೆ ಪ್ರಬಲ ಪೈಪೋಟಿ ನೀಡಿದ್ದಾರೆ.
ಭಟ್ಕಳ- ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸರಿ ಸಮಾನವಾದ ಪೈಪೋಟಿ ನಡೆದು ಎರಡೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸಮಾನ ಸಂಖ್ಯೆಯಲ್ಲಿ ಗೆಲುವು ಪಡೆದಿದ್ದಾರೆ ಎನ್ನಲಾಗಿದೆ.
ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ಸಿದ್ದಾಪುರ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಯಲ್ಲಾಪುರ- ಮುಂಡಗೋಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದರೆ, ಬನವಾಸಿ ಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೆಲವು ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿ ಬಿಜೆಪಿಗೆ ಪೈಪೋಟಿ ನೀಡಿದ್ದಾರೆ.
ಹಳಿಯಾಳ- ದಾಂಡೇಲಿ- ಜೊಯಿಡಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಹಳಿಯಾಳದಲ್ಲಿ ಬಿಜೆಪಿ ಸ್ವಲ್ಪ ಮೇಲುಗೈ ಸಾಧಿಸಿದ್ದರೆ, ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಗೆಲ್ಲುವ ಮೂಲಕ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಸಂಪೂರ್ಣ ಹಿನ್ನಡೆ
ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಕಣಕ್ಕೆ ಇಳಿದಿದ್ದರು. ಜೆಡಿಎಸ್ ಪಕ್ಷದಲ್ಲಿ ನಾಯಕರುಗಳ ಕೊರತೆಯಿಂದ ತನ್ನ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಕಡಿಮೆ ಸಂಖ್ಯೆಯಲ್ಲಿ ಇಳಿಸಿತ್ತು.
ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಿರಾಸಕ್ತಿ ವಹಿಸಿದ್ದರು. ಹೀಗಾಗಿ ಪಕ್ಷದ ಬೆಂಬಲಿತ ಬೆರಳೆಣಿಕೆಯ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನು ಕುಮಟಾ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಕ್ಷೇತ್ರದಲ್ಲಿ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಪಡೆದಿದ್ದಾರೆ. ಭಟ್ಕಳ, ಶಿರಸಿ, ಹಳಿಯಾಳ ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ ಗೆಲುವನ್ನು ಪಡೆದ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಹಲವು ಕ್ಷೇತ್ರದಲ್ಲಿ ತನ್ನ ಬೆಂಬಲಿತರನ್ನು ಕಣಕ್ಕೆ ಇಳಿಸಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಕೊರತೆಯಿಂದ ಚುನಾವಣಾ ಕಣದಲ್ಲಿ ಪಕ್ಷವೇ ಮಾಯವಾದಂತಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಓದಿ: ಉತ್ತರ ಕನ್ನಡದಲ್ಲಿ ಸೋಲಿಲ್ಲದ ಸರದಾರ: ಸತತ 9 ಬಾರಿ ಚುನಾವಣೆಯಲ್ಲಿ ಗೆಲುವು
ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಗೆಲುವು
ಈ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಯುವ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.