ಕಾರವಾರ: ಉತ್ತರಕನ್ನಡ ಜಿಲ್ಲಾಡಳಿತ ನೀಡುವ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಶನಿವಾರ ಬಿಡುಗಡೆಯಾದ ಸೋಂಕಿತರ ಸಂಖ್ಯೆ ಆತಂಕ ಸೃಷ್ಟಿಸಿದೆ. ಜಿಲ್ಲೆಯ 2 ತಾಲೂಕುಗಳಲ್ಲಿ ಕೇವಲ ಒಂದು ಪ್ರಕರಣ ಹಾಗೂ 4 ತಾಲೂಕಿನಲ್ಲಿ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗದೇ ಇದ್ದರೂ ಕೂಡ ಒಟ್ಟಾರೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಜಿಲ್ಲೆಯಲ್ಲಿ ಶನಿವಾರ ಒಟ್ಟು 1023 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಶಿರಸಿಯಲ್ಲಿ 358, ಸಿದ್ದಾಪುರದಲ್ಲಿ 348, ಅಂಕೋಲಾ 69, ಭಟ್ಕಳ 72, ಯಲ್ಲಾಪುರದಲ್ಲಿ 174 ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಉಳಿದಂತೆ ಮುಂಡಗೋಡ ಹಾಗೂ ಜೊಯಿಡಾದಲ್ಲಿ ತಲಾ ಒಂದು ಪ್ರಕರಣ ಹಾಗೂ ಕಾರವಾರ, ಕುಮಟಾ, ಹೊನ್ನಾವರ, ಹಳಿಯಾಳದಲ್ಲಿ ಪ್ರಕರಣಗಳು ಪತ್ತೆಯಾಗಿಲ್ಲ.
ಅತಿ ಹೆಚ್ಚು ಸಂಖ್ಯೆ ಬಂದಿರುವ ಕೊರೊನಾ ಪ್ರಕರಣಗಳನ್ನು ಕಡಿಮೆ ತೋರಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯೊ ಅಥವಾ ಇನ್ನಾವುದೇ ತಾಂತ್ರಿಕ ಸಮಸ್ಯೆ ಇದೆಯೇ ಎನ್ನುವುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31,996 ಪತ್ತೆಯಾಗಿದ್ದು, 24,547 ಮಂದಿ ಗುಣಮುಖರಾಗಿದ್ದಾರೆ. 6,656 ಮಂದಿ ಮನೆ ಹಾಗೂ 420 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಂದೇ ದಿನ 8 ಮಂದಿ ಸಾವನ್ನಪ್ಪಿದ್ದು ಒಟ್ಟು 373 ಮಂದಿ ಈವರೆಗೆ ಕೊರೊನಾಗೆ ಬಲಿಯಾಗಿದ್ದಾರೆ.