ಭಟ್ಕಳ(ಉತ್ತರ ಕನ್ನಡ): ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900ಕ್ಕೂ ಅಧಿಕ ಚೀಲ ಪಡಿತರ ಅಕ್ಕಿಯನ್ನು ಭಟ್ಕಳ ತಹಶೀಲ್ದಾರ್ ಡಾ. ಸುಮಂತ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸಲಗದ್ದೆಯ ನಿರ್ಜನ ಪ್ರದೇಶದಲ್ಲಿ ಪಾಳು ಬಿದ್ದ ಕ್ಯಾಶ್ಯು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿವೆ.
ಸಾರ್ವಜನಿಕರ ದೂರಿನ್ವಯದಂತೆ ತಹಶೀಲ್ದಾರ್ ಡಾ. ಸುಮಂತ, ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಗೋದಾಮ ಮೇಲೆ ದಾಳಿ ನಡೆಸಲಾಗಿದೆ. ತಾಲೂಕಿನ ನಾನಾ ಕಡೆಗಳಿಂದ ಜನರಿಂದ ಅಕ್ಕಿ ಸಂಗ್ರಹಿಸಿ ಕಡಸಲಗದ್ದೆಯಲ್ಲಿನ ನಿರ್ಜನ ಪ್ರದೇಶದ ಹಳೆಯ ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಗೋದಾಮಿನಲ್ಲಿ ಸಾಕಷ್ಟು ಗೋಣಿ ಚೀಲಗಳನ್ನು ಸಹ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಸದ್ಯ ಗೋದಾಮು ಸಹಿತ 900ಕ್ಕೂ ಅಧಿಕ ಅಕ್ಕಿ ಚೀಲ ಹಾಗೂ ಚೀಲ ಹೊಲಿಯುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಇರುವುದರಿಂದ ಸರ್ಕಾರಿ ಗೋದಾಮಿಗೆ ಸಾಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾತ್ರಿಯಿಂದ ಮುಂಜಾನೆಯವರೆಗೆ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು ಕಾವಲು ಕಾದಿದ್ದಾರೆ.
ಅಕ್ರಮ ಅಕ್ಕಿ ಸಂಗ್ರಹಿಸಿಟ್ಟ ಆರೋಪಿಗಳು ಮಾಹಿತಿ ತಿಳಿದು ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ. ಸ್ಥಳದಲ್ಲಿ ಆಹಾರ ನಿರೀಕ್ಷಕ ಪಾಂಡು ನಾಯ್ಕ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಗ್ರಾಮೀಣ ಠಾಣೆ ಪಿಎಸ್ಐ ಭರತ ಕುಮಾರ, ನಗರ ಠಾಣೆ ಪಿಎಸ್ಐಗಳಾದ ಸುಮಾ ಬಿ, ಹೆಚ್. ಕುಡಗುಂಟಿ ಹಾಗೂ ಸಿಬ್ಬಂದಿ ಇದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ.. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು