ಶಿರಸಿ : ದಲಿತ ಯುವಕ ಹಾಗೂ ಮರಾಠ ಯುವತಿ ಪ್ರೀತಿಸಿದ ಹಿನ್ನೆಲೆಯಲ್ಲಿ, ರಾಜ್ಯ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್, ದಲಿತರಿಗೆ ಹಾಗೂ ಪೊಲೀಸರಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಲಿತ ಯುವಕ, ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಜನಾಂಗದ ಮರಾಠಿ ಯುವತಿಯನ್ನು ಪ್ರೀತಿಸಿ ಓಡಿಹೋಗಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿ, ದಲಿತ ಸಂಘಟನೆ ಕಾರ್ಯಕರ್ತರು ವಿವಾಹಕ್ಕೆ ಮುಂದಾಗಿದ್ದರು. ಆದರೆ ತನ್ನ ಪ್ರಭಾವ ಬಳಸಿ ಯುವತಿಯನ್ನು ಬೇರ್ಪಡಿಸಲು ಪ್ರಯತ್ನಿಸಿದ್ದ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್, ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು ಎಂದು ದಲಿತ ಸಂಘಟನೆಗಳು ಆರೋಪಿಸಿವೆ.
ಘಟನೆ ಹಿನ್ನೆಲೆಯಲ್ಲಿ ದಲಿತ ಸಂಘಟಕರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಘೋಟ್ನೇಕರ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರನ್ನು ಪರಿಷತ್ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ತಹಸೀಲ್ದಾರ್ ಮುಖೇನ ರಾಜ್ಯಪಾಲರಿಗೆ ದಲಿತ ಸಂಘಟನೆಗಳು ಮನವಿ ಸಲ್ಲಿಸಿವೆ.