ಕಾರವಾರ: ತಮಿಳುನಾಡಿನಿಂದ ಮೀನುಗಾರಿಕೆಗೆ ತೆರಳಿ 11 ಮೀನುಗಾರರೊಂದಿಗೆ ನಾಪತ್ತೆಯಾಗಿದೆ ಎನ್ನಲಾಗಿದ್ದ ಮೀನುಗಾರಿಕಾ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆ ನಡೆಸಿ, ಲಕ್ಷದ್ವೀಪ ದ್ವೀಪಗಳಿಂದ ಸುಮಾರು 370 ಕಿಲೋ ಮೀಟರ್ ದೂರದಲ್ಲಿ ಪತ್ತೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಏ.6ರಂದು ಕೇರಳದ ಪಶ್ಚಿಮಕ್ಕೆ 11 ಸಿಬ್ಬಂದಿಗಳೊಂದಿಗೆ ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ಈ ಬೋಟ್ ತೆರಳಿತ್ತು. ಆದರೆ, ಮೀನುಗಾರರು ಸಂಪರ್ಕಕ್ಕೆ ಸಿಗದ ಕಾರಣ ಬೋಟ್ ಮುಳುಗಿದೆ ಎಂದು ಭಾವಿಸಿ ಇತರ ಮೀನುಗಾರರು, ಮರ್ಸಿಡಿಸ್ ನ ಅವಶೇಷಗಳೂ ಗೋವಾದಿಂದ ಸುಮಾರು 1100 ಕಿ.ಮೀ. (590 ಮೈಲಿ) ದೂರದಲ್ಲಿ ಪತ್ತೆಯಾಗಿರುವ ಬಗ್ಗೆ ತಮಿಳುನಾಡು ಮೀನುಗಾರಿಕಾ ಅಧಿಕಾರಿಗಳಿಗೆ ಏ.24ರಂದು ಮಾಹಿತಿ ನೀಡಿದ್ದರು.
ಸಮನ್ವಯ ಸಾಧಿಸಿ ಬೋಟ್ ಪತ್ತೆ ಹಚ್ಚಿದ ಎಂಆರ್‌ಸಿಸಿ
ಮುಂಬೈನ ಭಾರತೀಯ ಕೋಸ್ಟ್ ಗಾರ್ಡ್‌ನ ಮ್ಯಾರಿಟೈಮ್ ರಕ್ಷಣಾ ಸಮನ್ವಯ ಕೇಂದ್ರವು (ಎಂಆರ್‌ಸಿಸಿ) ಇಂಟರ್ನ್ಯಾಷನಲ್ ಸೇಫ್ಟಿ ನೆಟ್ ಸಕ್ರಿಯಗೊಳಿಸಿ, ಕಾಣೆಯಾದ ಬೋಟ್ ನ ಅವಶೇಷ ಸಿಕ್ಕ ಕಡೆಗಳಿಂದ ಸಾಗುವ ವೇಳೆ ದೋಣಿ ಇರುವಿಕೆಯ ಕುರಿತು ಮಾಹಿತಿ ಸಿಕ್ಕಲ್ಲಿ ತಿಳಿಸುವಂತೆ ವ್ಯಾಪಾರಿ ಹಡಗುಗಳಿಗೆ ಸೂಚಿಸಿತ್ತು. ಅದೇ ಸಮಯದಲ್ಲಿ, ಐಸಿಜಿಎಸ್ ಸಮುದ್ರ ಪ್ರಹಾರಿ ಪೆಟ್ರೋಲಿಂಗ್ ಬೋಟ್ ಅನ್ನು ಹುಡುಕಾಟಕ್ಕೆ ಇಳಿಸಲಾಗಿತ್ತು. ಇನ್ನು ಎಂಆರ್‌ಸಿಸಿ (ಮುಂಬೈ) ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಾಪಾರಿ ಹಡಗು ಮಾರ್ಸ್ಕ್ ಹಾರ್ಸ್‌ಬರ್ಗ್‌ನೊಂದಿಗೆ ಸಮನ್ವಯ ಸಾಧಿಸಿ, ಶೋಧ ಕಾರ್ಯಾಚರಣೆಗೆ ಸೇರಲು ವಿನಂತಿಸಿತ್ತು.
ಈ ವೇಳೆ ಬೋಟ್ ವರದಿಯಾದ ಸ್ಥಾನ ಪಾಕಿಸ್ತಾನದ ರಕ್ಷಣಾ ಪ್ರದೇಶದಲ್ಲಿ ಇದ್ದುದರಿಂದ, ಎಂಆರ್‌ಸಿಸಿ ಕರಾಚಿಯನ್ನು ಸಹ ಐಎಂಒ ಮಾನದಂಡಗಳ ಪ್ರಕಾರ ಸಹಾಯಕ್ಕಾಗಿ ಕೋರಲಾಗಿತ್ತು. ಮುಖ್ಯ ಭೂಭಾಗದಿಂದ ದೂರವನ್ನು ಪರಿಗಣಿಸಿ, ಭಾರತೀಯ ನೌಕಾಪಡೆಯು ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ವಿಮಾನವನ್ನು ಉಡಾವಣೆ ಮಾಡಲು ವಿನಂತಿಸಲಾಗಿತ್ತು. ಮೀನುಗಾರಿಕಾ ದೋಣಿ ಎಐಎಸ್ ಅಥವಾ ಇನ್ನಾವುದೇ ಟ್ರಾನ್ಸ್‌ಪಾಂಡರ್ ಅನ್ನು ಹೊತ್ತೊಯ್ದಿಲ್ಲವಾದ ಕಾರಣ ದೋಣಿಯನ್ನು ಪತ್ತೆ ಮಾಡಲು ಹಿನ್ನಡೆಯಾಗಿತ್ತು.
ಸವಾಲುಗಳ ನಡುವೆ ನಾಲ್ಕು ದಿನಗಳ ಕಾಲ ಹುಡುಕಾಟ
ಮುಖ್ಯ ಭೂಮಿ ಮತ್ತು ಹವಾಮಾನದಿಂದ ದೂರವಿದ್ದರೂ ಸವಾಲುಗಳ ನಡುವೆ ನಾಲ್ಕು ದಿನಗಳ ನಿರಂತರ ಹುಡುಕಾಟ ನಡೆಸಿ, ಕಾಣೆಯಾದ ಬೋಟ ಅನ್ನು ಲಕ್ಷದ್ವೀಪ ದ್ವೀಪಗಳಿಂದ ಸುಮಾರು 200 ಮೈಲಿ (ಸುಮಾರು 370 ಕಿಲೋಮೀಟರ್) ದೂರದಲ್ಲಿ ಪತ್ತೆ ಮಾಡಲಾಗಿದೆ. ಐಸಿಜಿ ಡಾರ್ನಿಯರ್ ಏ.28ರ ಬೆಳಗ್ಗೆ ಮೀನುಗಾರಿಕಾ ದೋಣಿ ಇರುವಿಕೆಯನ್ನು ದೃಢಪಡಿಸಿದೆ. ಎಂಆರ್‌ಸಿಸಿ (ಮುಂಬೈ) ಬೊಟ್ ಸ್ಯಾಟಲೈಟ್ ಫೋನ್‌ನಲ್ಲಿ ಮೀನುಗಾರಿಕಾ ದೋಣಿಯೊಂದಿಗೆ ಸಂವಹನವನ್ನು ಸಾಧಿಸಿದ್ದು, ಮೀನುಗಾರರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದೆ. ಈ ನಡುವೆ ಮೀನುಗಾರರು ಸುರಕ್ಷಿತವೆಂದು ತಿಳಿಸಲು ಸ್ಯಾಟಲೈಟ್ ಫೋನ್ ಮೂಲಕ ಅವರ ಕುಟುಂಬಸ್ಥರೊಂದಿಗೆ ತಮಿಳುನಾಡಿನ ಮೀನುಗಾರಿಕಾ ಅಧಿಕಾರಿಗಳು ಸಂಪರ್ಕ ಏರ್ಪಡಿಸಿದ್ದಾರೆ ಎಂಬ ಮಾಹಿತಿಯೂ ಬಂದಿದೆ. ಮೀನುಗಾರರಿಗೆ ಲಾಜಿಸ್ಟಿಕ್ ಮತ್ತು ವೈದ್ಯಕೀಯ ನೆರವು ನೀಡಲು ಲಕ್ಷದ್ವೀಪದಿಂದ ಐಸಿಜಿ ಹಡಗನ್ನು ನಿಯೋಜನೆ ಮಾಡಲಾಗಿದೆ. ಮೀನುಗಾರಿಕಾ ದೋಣಿ ಐಸಿಜಿ ಹಡಗಿನ ಬೆಂಗಾವಲಿನಲ್ಲಿ ತನ್ನ ಮೂಲ ಬಂದರಿಗೆ ಮರಳುತ್ತಿದ್ದು, ಮೇ 3ಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.