ಶಿರಸಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಕಾನೂನು ತನ್ನ ಕೆಲಸ ಮಾಡುತ್ತದೆ. ಯಾವುದೇ ಒತ್ತಾಯದಿಂದ ಕಾನೂನಾತ್ಮಕ ಪ್ರಕ್ರಿಯೆ ಹಿಂದೆ ಸರಿಯುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಹಾಗೇ ಯುವತಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಕುರಿತು ನನಗೆ ಮಾಹಿತಿಯಿಲ್ಲ ಎಂದರು.
ಬೇಡ್ತಿ, ವರದಾ ನದಿ ಜೋಡಣೆ ಸ್ಥಗಿತ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಚರ್ಚಿಸಲು ಶೀಘ್ರವೇ ಕ್ರಮವಹಿಸಲಾಗುವುದು. ಬೇರೆ ಜಿಲ್ಲೆಗೆ ನೀರು ಕೊಂಡೊಯ್ಯಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯ ನೀರಿನ ಸದ್ಬಳಕೆ ಯಾವ ವೇಗದಲ್ಲಿ ಆಗಬೇಕಿತ್ತೋ ಆ ವೇಗದಲ್ಲಿ ಮಾಡಲು ಎಲ್ಲರೂ ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡರು.
ಕಾಳಿ, ಅಘನಾಶಿನಿ, ಗಂಗಾವಳಿ, ಬೇಡ್ತಿ, ವರದಾ ಸೇರಿ 5 ನದಿಗಳಿರುವ ಜಿಲ್ಲೆಯಲ್ಲಿ ಇಂದಿಗೂ ಕುಡಿಯುವ ನೀರಿನ ಅಭಾವವಿದೆ. ಹಾಗಾಗಿ ಜಿಲ್ಲೆಯೊಳಗೆ ಜಿಲ್ಲೆಯ ನೀರಿನ ಸದ್ಬಳಕೆಗೆ ಮುಂದಾಗಬೇಕಿದೆ ಎಂದರು.