ಕಾರವಾರ (ಉತ್ತರ ಕನ್ನಡ) : "ಮುಂಡುಗೋಡಿನ ಜನರು ನನ್ನ ಜೊತೆಗ ಇರುವವರೆಗೆ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾರು ಏನೇ ಹೇಳಲಿ ಈ ಬಾರಿ ಗೆಲುವು ನನ್ನದೆ" ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಮುಂಡಗೋಡದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಾ, "ಯಾರೇ ಕೂಗಾಡಲಿ ಊರೇ ಹೋರಾಡಲಿ, ನಮ್ಮ ನೆಮ್ಮದಿಗೆ ಭಂಗವಿಲ್ಲ. ಮುಂಡಗೋಡಿನ ಜನ ನನ್ನ ಜತೆ ಇರುವರೆಗೂ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ" ಎಂದು ಸಂಪತ್ತಿಗೆ ಸವಾಲು ಚಿತ್ರಗೀತೆಯನ್ನು ಹಾಡಿದರು. "ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಮುಂದಿನ ಬಾರಿಯೂ ನಾನೇ ಗೆಲ್ಲುತ್ತೇನೆ. 139 ಕ್ಷೇತ್ರವನ್ನು ನಮ್ಮ ನಾಯಕರೆಲ್ಲರೂ ಸೇರಿ ಗೆಲ್ಲಿಸಿದರೆ, 140ನೇ ಕ್ಷೇತ್ರ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ರನ್ನು ಗೆಲ್ಲಿಸಲಿದ್ದಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕಿಗೆ ಸಿಕ್ತು ಬಂಗಾರದ ಸರ: ಅಂಗನವಾಡಿ ಶಿಕ್ಷಕಿಯೊಬ್ಬರು ಶಾಲೆಗೆ ಹೋಗುವಾಗ 4 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ಪೊಲೀಸರು ಸೊರಬಾ ಬಳಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತಾಲೂಕಿನ ಕಾನಗೋಡಿನ ಪೂರ್ಣಿಮಾ ನಾಯ್ಕ ಎಂಬುವರು ಸೋಮವಾರ ಅವರಗುಪ್ಪಾ ಅಂಗನವಾಡಿಗೆ ತೆರಳುತ್ತಿದ್ದಾಗ ಬಳ್ಳಟ್ಟೆ ಹತ್ತಿರ ಬ್ಯಾಗ್ನಲ್ಲಿದ್ದ 7 ತೊಲೆ ಬಂಗಾರದ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದರು. ಈ ಸಂಬಂಧ ಅವರು ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಿ ಸೊರಬಾಕ್ಕೆ ತೆರಳಿ ಕಳೆದುಕೊಂಡ ವಸ್ತುಗಳನ್ನು ತಂದು ಮರಳಿಸಿದ್ದಾರೆ. ಪಿಎಸ್ಐಗಳಾದ ಎಂ.ಜಿ ಕುಂಬಾರ, ಮಲ್ಲಿಕಾರ್ಜುನಯ್ಯ ಕೊರಾಣಿ, ಠಾಣೆಯ ರಮೇಶ ಕುಡಾಳ, ಉದಯ ಮೇಸ್ತಾ ಹಾಗೂ ಸಂಗೀತಾ ಕಾನಡೆ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಅಪರೂಪದ ಹಾರುವ ಬೆಕ್ಕು ಸಾವು: ಅಪರೂಪದಲ್ಲಿ ಅಪರೂಪವಾಗಿರುವ ಕಾಣುವ ಹಾರುವ ಬೆಕ್ಕು ಮರದಿಂದ ಮರಕ್ಕೆ ಹಾರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸಾವಿಗೀಡಾದ ಘಟನೆ ಶಿರಸಿ ನಗರದ ಟಿಎಸ್ಎಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಸುಮಾರು 10.15ಕ್ಕೆ ಘಟನೆ ನಡೆದಿದ್ದು, ಇದರಿಂದಾಗಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕಾಡಿನಲ್ಲಿ ವಾಸಮಾಡುವ ಈ ಹಾರುವ ಬೆಕ್ಕು ಮರದ ಪೊಟರೆಗಳಲ್ಲಿ ವಾಸಮಾಡುತ್ತದೆ. ನಗರ ಭಾಗದಲ್ಲಿ ಹಾರಾಡುವಾಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಹೊನ್ನಾವರದಲ್ಲಿ ಬ್ಯಾನರ್ ರಾಜಕೀಯ: ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯ ಸರ್ಕಲ್ ಬಳಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರು ಅಳವಡಿಸಿದ್ದ ಬ್ಯಾನರ್ಗೆ ಸಗಣಿ ಎರಚಿ ಕತ್ತರಿಸಿ ಹಾನಿ ಮಾಡಲಾಗಿದೆ. ಈ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಸಿ, ಮುಂದಿನ ದಿನದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಣೆಯಾದ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಪ್ರಚಾರದ ಬ್ಯಾನರ್ ಇತ್ತೀಚೆಗೆ ಕಾರ್ಯಕರ್ತರು ಅಳವಡಿಸಿದ್ದರು.
ಭಾನುವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ್ದು, ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಶಾಸಕಿ ಶಾರದಾ ಶೆಟ್ಟಿ ಭಾವಚಿತ್ರದ ಬಳಿ ಸಗಣಿ ಎರಚಿ ವಿರೂಪಗೊಳಿಸಿದ್ದಾರೆ. ಶಾಂತಿ ಕದಡುವ ಕೃತ್ಯ ಯಾರೂ ಮಾಡಬಾರದು. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿನೋದ ನಾಯ್ಕ ತಿಳಿಸಿದ್ದಾರೆ.
ಇದನ್ನೂ ಓದಿ : 'ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ': ವದಂತಿಗಳಿಗೆ ತೆರೆ ಎಳೆದ ಸಿಎಂ ಬೊಮ್ಮಾಯಿ