ಕಾರವಾರ : ರಮೇಶ್ ಜಾರಕಿಹೊಳಿ ಸಚಿವ ಸಂಪುಟದಲ್ಲಿ ಸೇರಬೇಕೆಂದು ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವಲ್ಲಿ ತ್ಯಾಗ ಮಾಡಿದವರಲ್ಲಿ ರಮೇಶ್ ಜಾರಕಿಹೊಳಿಯವರು ಕೂಡ ಒಬ್ಬರು. ಸಚಿವ ಸಂಪುಟ ಸೇರಲು ಬೇಡಿಕೆಯಿಟ್ಟಿದ್ದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷ, ರಾಷ್ಟ್ರೀಯ ಮುಖಂಡರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ.
ನಾವು ಸಚಿವ ಸಂಪುಟದಲ್ಲಿ ಇರೋದಕ್ಕಿಂತ ಮೊದಲೂ ಆಪ್ತರು, ಇವತ್ತೂ ಆಪ್ತರು, ನಾಳೆನೂ ಆಪ್ತರೆ. ಜಾರಕಿಹೊಳಿಯವರನ್ನು ಸಚಿವರನ್ನಾಗಿ ಮಾಡಲು ಬೆಂಬಲ ನೀಡುತ್ತೇವೆ. ಮೈತ್ರಿ ಪಕ್ಷದಿಂದ ಯಾರು ಯಾರು ಬಂದಿದ್ದಾರೋ ಅವರಿಗೆಲ್ಲಾ ಸ್ಥಾನ ನೇಡಬೇಕೆಂಬ ಬೇಡಿಕೆ ಇಡುತ್ತೇವೆ ಎಂದರು.
ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ನ್ಯಾಯಾಲಯದಲ್ಲಿರೋದ್ರಿಂದ ಹೆಚ್ಚು ಮಾತಾಡುವುದು ಸರಿಯಲ್ಲ. ತ್ರಿ ಸದಸ್ಯ ಪೀಠದ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ವಿಸ್ತ್ರತ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಸೂಚನೆಯನ್ನು ಹೈಕೋರ್ಟ್ ನೀಡಿದೆ. ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು.
ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಆಪಾದನೆ ಮಾಡುತ್ತಾರೆ. ಆ ಕಾರಣಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠ ರಚಿಸಿದ್ದಾರೆ. ನ್ಯಾಯಾಲಯದಲ್ಲಿ ವಿಸ್ತ್ರತ ಚರ್ಚೆ ಬಳಿಕ ಬರುವ ತೀರ್ಪಿನಂತೆ ನಿರ್ಧಾರವಾಗಲಿದೆ ಎಂದರು.
ಇದನ್ನೂ ಓದಿ: ಹಿಜಾಬ್ ಗಲಾಟೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಥಸಂಚಲನ..