ಭಟ್ಕಳ(ಉತ್ತರ ಕನ್ನಡ): ಯಾವುದೇ ಕಾರಣಕ್ಕೂ ಜನರಿಗೆ ಭರವಸೆ ನೀಡಿ ಮೋಸ ಮಾಡುವ ಕೆಲಸಕ್ಕೆ ನಾನು ಹೋಗುವುದಿಲ್ಲ. ನನ್ನ ಮೇಲಿನ ವಿಶ್ವಾಸದ ಮೇರೆಗೆ ನನ್ನ ಕ್ಷೇತ್ರದ ಜನರು ಸತತ 6 ಬಾರಿ ಗೆಲ್ಲಿಸಿದ್ದಾರೆ. ಭರವಸೆಗಿಂತ ಸಕ್ರಿಯವಾಗಿ ಜನಪರ ಕೆಲಸ ಮಾಡಬೇಕು. ನಮ್ಮ ಸಕ್ರಿಯ ಕೆಲಸದಿಂದಲೇ ಜನರು ಭರವಸೆ ಹೊಂದುವಂತೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ತಿಳಿಸಿದರು.
ಮಂಗಳವಾರ ಭಟ್ಕಳಕ್ಕೆ ಆಗಮಿಸಿದ್ದ ಅವರು, ಅಳ್ವೇಕೋಡಿ, ಹೆಬಳೆ ತೆಂಗಿನಗುಂಡಿ, ಮಾವಿನಕುರ್ವೇ ಬಂದರು ಹಾಗೂ ತೌಕ್ತೆ ಚಂಡಮಾರುತದಿಂದಾದ ಹಾನಿಗೊಳಗಾದ ಮಾವಿನಕುರ್ವೇ ತಲಗೋಡ ಸಮುದ್ರ ತೀರ ಅಲೆ ತಡೆಗೋಡೆ, ರಸ್ತೆ ಕಾಮಗಾರಿ ವೀಕ್ಷಿಸಿ ಇಲಾಖೆಯಿಂದ ಆಗಬೇಕಾದ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದರು.
ಈಗಾಗಲೇ ಈ ಭಾಗದ ಚಂಡಮಾರುತದ ಹಾನಿ, ಅಭಿವೃದ್ಧಿಯ ಕೆಲಸದ ಬಗ್ಗೆ ಶಾಸಕ ಸುನೀಲ್ ನಾಯ್ಕ್ ಮನವರಿಕೆ ಮಾಡಿದ್ದರು. ಆದರೂ ಸಹ ಜವಾಬ್ದಾರಿ ಅರಿತು ಸ್ಥಳ ಪರಿಶೀಲನೆಗೆ ಬಂದಿರುವ ಉದ್ದೇಶವು ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ಅರಿತುಕೊಂಡು ಕೆಲಸ ಮಾಡಬೇಕಾಗಿದೆ. ಇದರಿಂದ ಮುಂದಿನ ದಿನದಲ್ಲಿ ಈ ವಸ್ತು ಸ್ಥಿತಿಯ ಪರಿಶೀಲನೆ ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಲಿದೆ ಎಂದರು.
ಈಗಾಗಲೇ ಸರ್ಕಾರವು ಎರಡನೇ ಹಂತದ 500 ಕೋಟಿ ರೂ. ಪ್ಯಾಕೇಜ್ ಘೋಷಣೆಯಲ್ಲಿ ಮೀನುಗಾರರಿಗೆ ಪರಿಹಾರ ಧನ ಘೋಷಿಸಿದೆ. ಆದರೆ ಯಾಂತ್ರೀಕೃತ, ನಾಡದೋಣಿ, ಪಾತಿದೋಣಿ ಸೇರಿದಂತೆ ಎಲ್ಲಾ ಮೀನುಗಾರರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಶುಕ್ರವಾರದಂದು ಇಲಾಖೆಯ ಸಭೆಯಿದ್ದು ಅದರಲ್ಲಿ ಚರ್ಚಿಸಿ ಕರಾವಳಿ ಭಾಗದ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳಲಿದ್ದೇನೆ. ಕೇವಲ 4 ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದು ಕರಾವಳಿ ಭಾಗದ ರಾಜ್ಯದ ಮೀನುಗಾರಿಕೆ, ಮೀನುಗಾರರ ಬಗ್ಗೆ ಪರವಾದ ನಿರ್ಧಾರದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇರುವ ಸಂದರ್ಭದಲ್ಲಿ ಕೇಂದ್ರದ ಅನುದಾನ ಬಳಸಿಕೊಂಡು ನಮ್ಮ ಭಾಗದ ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಸಚಿವ ಸದಾನಂದ ಗೌಡ ಜೊತೆ ಮಾತುಕತೆ ನಡೆಸಲಾಗುತ್ತಿವೆ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವಂತಹ ಪ್ರಯತ್ನಗಳು ನಡೆಯುತ್ತಿದೆ. ಡಿಸೇಲ್, ಸೀಮೆಎಣ್ಣೆ ಸಮಸ್ಯೆಯು ಗಮನದಲ್ಲಿದ್ದು, ಅವೆಲ್ಲದರ ಪರಿಹಾರಕ್ಕೆ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು.