ಶಿರಸಿ(ಉತ್ತರ ಕನ್ನಡ): ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಸನ್ನಿಧಿ ಹೆಗಡೆಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶಾಲು ಹೊದಿಸಿ ಸನ್ಮಾನಿಸಿದರು.
ತಾಲೂಕಿನ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸನ್ನಿಧಿ 625ಕ್ಕೆ 625 ಅಂಕ ಗಳಿಸಿದ್ದಾಳೆ. ಈ ಹಿನ್ನೆಲೆ ಕ್ಷೇತ್ರ ಪ್ರವಾಸದಲ್ಲಿದ್ದ ಸಚಿವ ಹೆಬ್ಬಾರ್, ಶಾಲೆಗೆ ಆಗಮಿಸಿ ವಿದ್ಯಾರ್ಥಿನಿಗೆ ಹಾಗೂ ಅವರ ತಾಯಿಗೆ ಸನ್ಮಾನ ಮಾಡಿದ್ದಾರೆ.
ನಂತರ ಮಾತನಾಡಿದ ಸಚಿವರು, ಉತ್ತರ ಕನ್ನಡ ಜಿಲ್ಲೆಗೆ ಇದೊಂದು ಅವಿಸ್ಮರಣೀಯ ದಿನ. ನಾವು ನಿರೀಕ್ಷೆ ಮಾಡದ ಕ್ಷಣ ಇದಾಗಿದ್ದು, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಇಂತಹ ಸಾಧನೆ ಮಾಡಿರುವುದು ಪ್ರತಿಯೊಬ್ಬರಿಗೂ ಸರ್ಕಾರಿ ಶಾಲೆಗಳ ಮಹತ್ವ ಸಾರುವ ಉದಾಹರಣೆಯಾಗಿದೆ. ಈಕೆಯ ಸಾಧನೆ ಇಡಿ ಜಿಲ್ಲೆಗೇ ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.