ಕಾರವಾರ: "ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ಆ ಗೌಡ್ರು ಏನಾದ್ರು, ಈ ಗೌಡ್ರು ಏನಾದ್ರು ಎಂದು ಕೇಳುವ ಸಂದರ್ಭ ಇದಲ್ಲ. ಯಾವುದೇ ಪಕ್ಷದವರಾದರೂ ಇಂಥ ಚಿಂತನೆಗಳನ್ನು ಕೈ ಬಿಡಬೇಕು" ಎಂದು ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ವಿಚಾರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಅಂಕೋಲಾದಲ್ಲಿ ಭಾನುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದಾಗ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, "ನಮ್ಮ ದೇಶ, ರಾಜ್ಯಕ್ಕೆ ಇನ್ನೂ ಸಾಕಷ್ಟು ಸವಾಲುಗಳಿವೆ. ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ, ನೀರಾವರಿ, ಕೃಷಿ ಅಭಿವೃದ್ಧಿಯಂತಹ ಕೆಲಸಗಳು ಆಗಬೇಕಿದೆ. ದೇಶ ಸ್ವತಂತ್ರಗೊಂಡು ನೂರು ವರ್ಷಗಳನ್ನು ಪೂರೈಸುವ ವೇಳೆಗೆ ಭಾರತ ಹೇಗಿರಬೇಕು ಎನ್ನುವುದನ್ನು ಎಲ್ಲರೂ ಚಿಂತಿಸಬೇಕು. ಅದರ ಬದಲು ಯಾವುದೇ ಲಾಭವೂ ಇಲ್ಲದ, ನಷ್ಟವೂ ಇಲ್ಲದ ಇಂತಹ ಚಿಂತನೆಗಳಿಂದ ಸಮಯ ವ್ಯರ್ಥವಾಗುವುದನ್ನು ಹೊರತುಪಡಿಸಿ ಮತ್ತೇನೂ ಆಗುವುದಿಲ್ಲ. ಇದೆಲ್ಲವನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಬೇಕು" ಎಂದು ಸಲಹೆ ನೀಡಿದರು.
ತುಮಕೂರಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ನಡುವಿನ ಭಿನ್ನಾಭಿಪ್ರಾಯದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ರದ್ದುಗೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ನಿರಾಣಿ, "ಯಾವುದೇ ಪಕ್ಷದಲ್ಲಾದರೂ ಸಮಸ್ಯೆಗಳು ಇರುವುದು ಸಹಜ. ನಮ್ಮ ರಾಜ್ಯದ ನಾಯಕರು, ರಾಷ್ಟ್ರದ ನಾಯಕರು ಅದನ್ನ ನಿಭಾಯಿಸಲು ಸಮರ್ಥರಿದ್ದಾರೆ. ಈ ಸಮಸ್ಯೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪರಿಹರಿಸುವ ಭರವಸೆಯಿದೆ" ಎಂದರು.
ಲಕ್ಷ್ಮಣ ಸವದಿ ಪಕ್ಷದ ಟಿಕೆಟ್‌ಗೆ ಬೇಡಿಕೆಯಿಟ್ಟ ವಿಚಾರವಾಗಿ ಮಾತನಾಡಿ, "ಟಿಕೆಟ್ ಕೇಳಲು ಪಕ್ಷದ ಕಟ್ಟಕಡೆಯ ಕಾರ್ಯಕರ್ತರೂ ಅರ್ಹರಿದ್ದಾರೆ. ಆದರೆ ಪಕ್ಷ ಯಾರು ಅರ್ಹರು ಎನ್ನುವುದನ್ನು ನೋಡಿ ಟಿಕೆಟ್ ನೀಡುತ್ತದೆ. ಟಿಕೆಟ್ ಯಾರಿಗೇ ಕೊಟ್ಟರೂ ಅವರೊಂದಿಗೆ ಎಲ್ಲರೂ ಕೂಡಿ ಕೆಲಸ ಮಾಡುವುದು ನಮ್ಮ ಕರ್ತವ್ಯ" ಎಂದು ತಿಳಿಸಿದರು.
ಸಿದ್ಧರಾಮಯ್ಯ ಕೋಲಾರದಲ್ಲೂ ನಿಲ್ಲಲು ಹಿಂದೇಟು ಹಾಕಿರುವ ಕ್ಷೇತ್ರದ ಗೊಂದಲ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಅವರ ಪಕ್ಷವನ್ನು ಅವರೇ ಸುಧಾರಣೆ ಮಾಡಿಕೊಳ್ಳಬೇಕು. ಈ ಕುರಿತು ನಾನು ಕಮೆಂಟ್ ಮಾಡಲ್ಲ. ನಮ್ಮ ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷ. ನಮಗೆ ಉತ್ತಮ ನಾಯಕರುಗಳ ನೇತೃತ್ವ ಇದೆ. ಅಟಲ್ ಬಿಹಾರಿ ವಾಜಪೇಯಿ ಅಂಥವರು ಕಟ್ಟಿ ಬೆಳೆಸಿದ ಪಕ್ಷ. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮುಂಚೂಣಿಗೆ ಹೋಗುವತ್ತ ಹೆಜ್ಜೆ ಹಾಕುತ್ತಿದೆ. ಬೇರೆ ಪಕ್ಷ ಏನು ಮಾಡುತ್ತಿದೆ ಎನ್ನುವುದನ್ನ ನಾವು ನೋಡಲ್ಲ. ನಮ್ಮ ಪಕ್ಷ ಮುಂದಿನ 25 ವರ್ಷಗಳಲ್ಲಿ ಏನು ಮಾಡಬೇಕು ಎನ್ನುವ ಕಲ್ಪನೆಯೊಂದಿಗೆ ಮುಂದೆ ಹೊರಟಿದ್ದೇವೆ" ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿ ಬಂದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ನಮ್ಮಲ್ಲಿ ಸ್ಪರ್ಧಿಸುವಂತಹ 224 ಶಾಸಕರು ಸಹ ಮುಖ್ಯಮಂತ್ರಿ ಆಗುವ ಅರ್ಹತೆಯನ್ನು ಹೊಂದಿದ್ದಾರೆ. ಆದರೆ ಯಾರನ್ನು ಎಂಎಲ್‌ಎ ಮಾಡಬೇಕು, ಯಾರನ್ನು ಮಂತ್ರಿ ಮಾಡಬೇಕು, ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವ ತೀರ್ಮಾನವನ್ನು ಪಕ್ಷದ ನಾಯಕರು ತೆಗೆದುಕೊಳ್ಳಲಿದ್ದಾರೆ" ಎಂದು ತಿಳಿಸಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಅಂಕೋಲಾದಲ್ಲಿ ನಿನ್ನೆ (ಭಾನುವಾರ) ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಯಲ್ಲಾಪುರ ಮಾರ್ಗವಾಗಿ ಬಾಳೇಗುಳಿ ಮೂಲಕ ಪಟ್ಟಣಕ್ಕೆ ಆಗಮಿಸಿದ ಯಾತ್ರೆಗೆ ಪುಷ್ಪವೃಷ್ಟಿ ಸುರಿಸಿ ಕಾರ್ಯಕರ್ತರು ಬರಮಾಡಿಕೊಂಡರು. ಯಾತ್ರೆಯಲ್ಲಿ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ಸೇರಿದಂತೆ ಜಿಲ್ಲೆಯ ಮುಖಂಡರುಗಳು ಭಾಗವಹಿಸಿದ್ದರು.
ಬೈಕ್ ರ‍್ಯಾಲಿ, ಕಾರ್ಯಕರ್ತರ ಪಾದಯಾತ್ರೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯ ಸಂಕಲ್ಪ ಯಾತ್ರೆಯ ರಥ ಸಂಚರಿಸಿತು. ಈ ವೇಳೆ ನೂರಾರು ಮಂದಿ ಕಾರ್ಯಕರ್ತರು ಯಾತ್ರೆಯುದ್ದಕ್ಕೂ ಬಿಜೆಪಿ ಪರ ಘೋಷಣೆಗಳನ್ನು ಕೂಗುತ್ತಾ, ಪಕ್ಷದ ಸಾಧನೆ ಸಾರುವ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಾ ಸಾಗಿದರು. ಈ ವೇಳೆ ಮಾತನಾಡಿದ ಸಚಿವ ನಿರಾಣಿ "ನಾಲ್ಕು ಭಾಗಗಳಲ್ಲಿ ಆರಂಭಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲ ಕಡೆಗಳಲ್ಲೂ ದೇವದುರ್ಲಭವಾದಂತಹ ದೃಶ್ಯ ಕಂಡು ಬರುತ್ತಿದೆ. ಪ್ರತಿನಿತ್ಯ ಮೂರು ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದು ಅಂಕೋಲಾದಲ್ಲಿ ನಡೆದ ಯಾತ್ರೆಗೂ ಅದ್ಭುತವಾದ ಬೆಂಬಲ ವ್ಯಕ್ತವಾಗಿದೆ. ಇದನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ನಿಶ್ಚಿತವಾಗಿ ಭಾರತೀಯ ಜನತಾ ಪಾರ್ಟಿ 140ಕ್ಕೂ ಹೆಚ್ಚಿನ ಸ್ಥಾನಗಳನ್ನ ಗೆಲ್ಲುವ ಮೂಲಕ ಮತ್ತೆ ಮೇನಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ಭರವಸೆ ಮೂಡುತ್ತಿದೆ ಎಂದರು.
ಯಾತ್ರೆಯ ಬಳಿಕ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, "ಇವತ್ತಿನ ವಿಜಯ ಸಂಕಲ್ಪ ಯಾತ್ರೆಗೆ ಇಷ್ಟು ಪ್ರಮಾಣದಲ್ಲಿ ಜನರು ಸೇರಿದ್ದನ್ನು ಕಂಡಾಗ ಯಾತ್ರೆ ಯಶಸ್ವಿಯಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಳ್ಳೆ ಕೆಲಸ ಮಾಡಿದ್ದರೆ ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ: ಸಚಿವ ನಿರಾಣಿ