ಕಾರವಾರ: ಸಿದ್ದರಾಮಯ್ಯ ಹೇಳಿಕೆ ಕಾಲಕಾಲಕ್ಕೆ ಸ್ಫೋಟಗೊಂಡಾಗ ಬಿಜೆಪಿಗೇ ಅನುಕೂಲವಾಗತ್ತೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಹಿಜಾಬ್ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇತ್ತೀಚಿಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಮೀಜಿಗಳು ತಲೆಗೆ ಪೇಟ ತೊಡುವುದಿಲ್ಲವಾ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಸಚಿವ ಪೂಜಾರಿ, ಸಿದ್ದರಾಮಯ್ಯ ಮಾನಸಿಕತೆ ನ್ಯಾಯಾಲಯದ ಆದೇಶವನ್ನ ಗೌರವಿಸುವ ಸ್ಥಿತಿಯಲ್ಲಿ ಇಲ್ಲ. ಯಾಕೆ ಗೌರವಿಸುತ್ತಿಲ್ಲವೆಂದು ಅವರನ್ನೇ ಕೇಳಬೇಕು ಎಂದರು.
ಕಾಯ್ದೆ ತಂದವರು ನೀವು, ಇರುವ ಕಾಯ್ದೆ ಅನುಷ್ಠಾನ ಮಾಡಿದ್ದೇವೆ ಅಷ್ಟೇ : ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ವಿಚಾರಕ್ಕೆ ಪ್ರತಿಕ್ರಿಯೆಸಿದ ಸಚಿವರು, ನಮ್ಮ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಮರ್ಪಕವಾಗಿ ಇದಕ್ಕೆ ಸದನದಲ್ಲೇ ಉತ್ತರ ನೀಡಿದ್ದಾರೆ. ಕಾಯ್ದೆ ತಂದವರು ನೀವು(ಕಾಂಗ್ರೆಸ್ನವರು), ಇರುವ ಕಾಯ್ದೆಯನ್ನು ಈಗ ಅನುಷ್ಠಾನ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಜಾತಿ, ಧರ್ಮ, ದೇಶದ ವಿರುದ್ಧದ ಸಂದೇಶ ಕಳುಸುತ್ತಿರುವವರನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಕುಚೋದ್ಯ ಮಾಡುವ, ತಪ್ಪು ಮಾಡುವವರನ್ನ ಕಾನೂನು ಚೌಕಟ್ಟಿನಲ್ಲಿ ತರುವ ಕೆಲಸ ಮಾಡುತ್ತೇವೆ. ಕಾನೂನಿಗೆ, ರಾಷ್ಟ್ರೀಯತೆಗೆ ಸವಾಲು ಹಾಕುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ಇದೇ ವೇಳೆ ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದಿನ ತಿಂಗಳ ಎರಡನೇ ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಹೂಡಲಿದ್ದು, ಈ ಬಗ್ಗೆ ಇಂದು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸುವ ತಿಳಿಸಿದರು.