ಕಾರವಾರ/ಉತ್ತರ ಕನ್ನಡ: ಸಾಮಾನ್ಯವಾಗಿ ಕಳ್ಳರು ಬೆಳ್ಳಿ, ಬಂಗಾರ, ಹಣ ಕಳ್ಳತನ ಮಾಡ್ತಾರೆ. ಆದರೆ ಇಲ್ಲೋರ್ವ ಭೂಪ ಬೆಳಗ್ಗೆ ಮಾರಾಟಕ್ಕೆ ಇಳಿಸಿದ್ದ ಹಾಲು, ಮೊಸರನ್ನೂ ಕಳ್ಳತನ ಮಾಡಿದ್ದು, ಈ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ .
ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿಯ ಗೀತಾ ಕೂಲ್ಡ್ರಿಂಕ್ಸ್ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ 4 ಗಂಟೆಗೆ ಬಂದು ಅಂಗಡಿ ಎದುರು ಇಳಿಸಿಟ್ಟಿದ್ದ ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಗಳನ್ನು ಕಳ್ಳತನ ನಡೆಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಅಂಗಡಿಯ ಮಾಲೀಕ, ಚಂದ್ರಕಾಂತ್ ಭಂಡಾರಿ ಹೇಳುವ ಪ್ರಕಾರ, ಒಂದೆರಡು ಹಾಲಿನ ಪ್ಯಾಕೆಟ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಅತಿ ಹೆಚ್ಚು ಹಾಲಿನ ಪ್ಯಾಕೆಟ್ ಕದ್ದೊಯ್ದಿದ್ದಾನೆ. ಒಂದು ವಾರದಲ್ಲಿ ಎರಡು ಬಾರಿ ಕಳ್ಳತನವಾಗಿದೆ. ಕಳ್ಳತನ ಮಾಡಿರುವ ವ್ಯಕ್ತಿ ಅಪರಿಚಿತನಾಗಿದ್ದು, ಈತನ ಮುಖಚಹರೆಯ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲ ಎಂದಿದ್ದಾರೆ.
ಇದೀಗ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.