ಕಾರವಾರ: ಯುದ್ಧಗ್ರಸ್ಥ ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿ ಪ್ರತೀಕ್ ಶೇಟ್ ಕೊನೆಗೂ ಕಾರವಾರಕ್ಕೆ ಸುರಕ್ಷಿತವಾಗಿ ಬಂದು ತಲುಪಿದ್ದು, ಕುಟುಂಬಸ್ಥರು ಮಗನನ್ನು ಬಿಗಿದಪ್ಪಿಕೊಂಡು ಸಿಹಿ ತಿನ್ನಿಸಿ ಸ್ವಾಗತಿಸಿದರು.
ಒಂದೂವರೆ ತಿಂಗಳ ಹಿಂದೆ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ನ ಉಝೋರ್ಡ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದ ಪ್ರತೀಕ್ ಶೇಟ್, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಉಂಟಾದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಹಾಯ ಪಡೆದು ಮರಳಿ ಭಾರತಕ್ಕೆ ವಾಪಸ್ ಆಗಿದ್ದಾರೆ. ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿ ಬಂದ ಮಗನನ್ನು ಪಾಲಕರು ಸಂತಸದಿಂದ ಬಿಗಿದಪ್ಪಿಕೊಂಡು, ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಿದರು.
ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಪ್ರತಿಕ್ರಿಯೆ ನೀಡಿದ ಪ್ರತೀಕ್, ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡ್ತಿರೋದ್ರಿಂದ ಅಲ್ಲಿನ ಜನ ಆಕ್ರೋಶಗೊಂಡಿದ್ದಾರೆ. ಸ್ವತಃ ಗನ್ ಹಿಡಿದು ಹೋರಾಡುತ್ತಿದ್ದಾರೆ. ಝೋಹಾನಿ ಹಂಗ್ರೆ ಗಡಿಯಿಂದ ಬುಡ್ಡಾಪೆಸ್ಟ್ಗೆ ವಿದ್ಯಾರ್ಥಿಗಳ ರವಾನೆ ಮಾಡಿ, ಅಲ್ಲಿಂದ ಇಂಡಿಯನ್ ಏರ್ಲೈನ್ಸ್ ಮೂಲಕ ದೆಹಲಿಗೆ ನಮ್ಮನ್ನ ಕರೆತರಲಾಗಿದೆ. ಆದರೆ, ಉಕ್ರೇನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನ ಕರೆ ತರುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಂದ ಜೀತ - ಪೋಷಕರ ಆರೋಪ!