ಕಾರವಾರ: ಮೇಲ್ಸೇತುವೆಗಾಗಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬೀದಿಗಿಳಿದು ತಮ್ಮ ದೈನಂದಿನ ಓಡಾಟಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಿ ಸಂಭವಿಸಬಹುದಾದ ಅನಾಹುತ ತಪ್ಪಿಸುವಂತೆ ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದರು.
ಕುಂದಾಪುರದಿಂದ ಕಾರವಾರದ ಮಾಜಾಳಿ ಗಡಿ ಭಾಗದವರೆಗೆ ರಾಷ್ಟ್ರೀಯ ಹೆದ್ದಾರಿ 66ರನ್ನು ಅಗಲೀಕರಣಗೊಳಿಸಲಾಗುತ್ತಿದೆ. ಕಳೆದ ಆರೇಳು ವರ್ಷಗಳಿಂದ ಕಾಮಗಾರಿ ಚಾಲ್ತಿಯಲ್ಲಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಆದರೆ, ಹೊನ್ನಾವರ ಪಟ್ಟಣದಲ್ಲಿ ನಿರ್ಮಾಣವಾಗಬೇಕಿದ್ದ ಮೇಲ್ಸೇತುವೆ ಬದಲು 30 ಮೀಟರ್ ಹೆದ್ದಾರಿ ನಿರ್ಮಾಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಇಂದು ಗೇರುಸೊಪ್ಪ ಸರ್ಕಲ್ನಿಂದ ಶರಾವತಿ ಸರ್ಕಲ್ವರೆಗೆ ಸುಮಾರು 5000 ಸಾವಿರ ಜನ ಬೃಹತ್ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಇದೆ ಹೆದ್ದಾರಿಯಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಆದರೆ, ಈಗಾಗಲೇ ಇಕ್ಕಟ್ಟಾದ ರಸ್ತೆಯಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ಪ್ರಾಣ ಹಾನಿ ಕೂಡ ಸಂಭವಿಸಿದೆ. ಇಷ್ಟಾದರೂ ಕೂಡ ಹೆದ್ದಾರಿಯನ್ನು ಮೇಲ್ಸೇತುವೆಯನ್ನೊಳಗೊಂಡು 456 ಮೀಟರ್ ಬದಲು ನಿರ್ಮಿಸುವ ಬದಲು ಕೇವಲ 30 ಮೀಟರ್ನಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ, ಹೀಗೆ ಮಾಡಿದ್ದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಮೇಲ್ಸೇತುವೆ ಹೋರಾಟ ಸಮಿತಿ ಸದಸ್ಯ ಜಿ ಜಿ ಶಂಕರ್ ತಿಳಿಸಿದರು.
ಇನ್ನು, ಹೆದ್ದಾರಿಗೆ ಹೊಂದಿಕೊಂಡು ಶಾಲಾ ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿಗಳಿದ್ದು, ಎಲ್ಲರಿಗೂ ತೊಂದರೆಯಾಗುತ್ತದೆ. ಈ ಹಿಂದೆ 45 ಮೀಟರ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಸರ್ವೆ ಮಾಡಲಾಗಿದೆಯಾದರೂ ಇದೀಗ 30 ಮೀಟರ್ ಹೆದ್ದಾರಿ ಮಾತ್ರ ನಿರ್ಮಾಣಕ್ಕೆ ಮುಂದಾಗಿರುವುದು ಮಾಹಿತಿ ಹಕ್ಕಿನಿಂದ ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದಂತೆ ಒತ್ತಾಯಿಸಲಾಯಿತು. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳು ಹಾಗೂ ಮಾನ್ಯ ಸಂಸದರ ಜೊತೆ ಸಮಿತಿಯ ಸದಸ್ಯರೊಂದಿಗೆ ಸೇರಿ ಚರ್ಚೆ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಎರಡು ನಮ್ಮದೆ ಸರ್ಕಾರ ಇರುವುದರಿಂದ ಈ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ದಿನಕರ್ ಶೆಟ್ಟಿ ಹೇಳಿದರು.