ಕಾರವಾರ : ನಗರ ಪ್ರದೇಶವಲ್ಲದೇ ಹಳ್ಳಿಗಳಲ್ಲೂ ಸೋಂಕು ಕಾಣಿಸುತ್ತಿದೆ. ಇದರಿಂದ ಆತಂಕಗೊಂಡ ಜನರು ಊರಿಗೆ ಸೋಂಕು ವಕ್ಕರಿಸದಂತೆ ತಡೆಯುವ ನಿಟ್ಟಿನಲ್ಲಿ ಊರಿಂದ ಹೊರಗೆ ಹೋಗುವುದು ಹಾಗೂ ಬರುವುದು ಮಾಡಿದಿದ್ರೆ ದಂಡ ಪ್ರಯೋಗಿಸೋ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಇಂತಹ ಒಂದು ಕಟ್ಟಾಜ್ಞೆ ಹೊರಡಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದಲ್ಲಿ. ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಆತಂಕಗೊಂಡಿರುವ ಇಲ್ಲಿನ ಗ್ರಾಮಾಭಿವೃದ್ಧಿ ಸಮಿತಿ ನಿಯಮ ರೂಪಿಸಿದೆ. ಗದ್ದೆ ನಾಟಿ ಕೆಲಸಕ್ಕೆ ಯಾರೂ ಬೇರೆ ಊರಿಗೆ ಹೋಗುವಂತಿಲ್ಲ. ಇತರರು ನಮ್ಮ ಊರಿಗೆ ಬರುವಂತಿಲ್ಲ. ಗಾರ್ಮೆಂಟ್ಸ್‌ಗಳಿಗೂ ಭೇಟಿ ನೀಡುವಂತಿಲ್ಲ. ಶಿವಮೊಗ್ಗದ ಸಾಗರ ಹಾಗೂ ಇತರ ಯಾವುದೇ ನಗರಗಳಿಗೆ ಹೋಗುವಂತಿಲ್ಲ ಎಂದು ಘೋಷಣೆ ಮಾಡಲಾಗಿದೆ.
ಇನ್ನು, ಬೆಂಗಳೂರಿಗೆ ಪದೇಪದೆ ತೆರಳುವಂತಿಲ್ಲ. ಬೆಂಗಳೂರು ಅಥವಾ ಇತರೆ ಭಾಗಗಳಿಗೆ ತೆರಳಿ ಬಂದವರ ಬಗ್ಗೆ ಮಾಹಿತಿ ನೀಡಿದಲ್ಲಿ ₹1000 ಪ್ರೋತ್ಸಾಹ ಧನ ನೀಡುವುದಾಗಿ ಮೈಕ್ ಮೂಲಕ ಊರಿನಲ್ಲಿ ಘೋಷಣೆ ಮಾಡಲಾಗಿದೆ.
ಯಾರಾದರೂ ನಿಯಮ ಮೀರಿದಲ್ಲಿ ಗ್ರಾಮಾಭಿವೃದ್ಧಿ ವತಿಯಿಂದ ₹5000 ದಂಡ ನೀಡುವ ಬಗ್ಗೆ ಮನ್ಮನೆ ಗ್ರಾಮಾಭಿವೃದ್ಧಿ ಸಮಿತಿ ಎಚ್ಚರಿಸಿದೆ. ಅಲ್ಲದೇ ನಿಮ್ಮ ಮಕ್ಕಳು, ಪೋಷಕರ ರಕ್ಷಣೆ ನಿಮ್ಮ ಹೊಣೆ ಎಂದು ಸೂಚಿಸಿದೆ.